ಕೇಂದ್ರ ಸರ್ಕಾರದಿಂದ ಹಫ್ತಾ ಸುಲಿಗೆ: ರಾಹುಲ್‌

| Published : Apr 18 2024, 02:15 AM IST / Updated: Apr 18 2024, 07:31 AM IST

ಸಾರಾಂಶ

ಉದ್ಯಮಿಗಳ ಬೆದರಿಸಿ ಬಾಂಡ್ ಮೂಲಕ ವಸೂಲಿ ಮಾಡಲಾಗಿದ್ದು, ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಕೈಗೊಂಡಿದ್ದಾರೆ.

 ಮಂಡ್ಯ/ಕೋಲಾರ:  ಚುನಾವಣಾ ಬಾಂಡ್‌ಗಳು ವಿಶ್ವದಲ್ಲೇ ಅತಿದೊಡ್ಡ ಸುಲಿಗೆ ಹಗರಣವಾಗಿದೆ. ಈ ವಿವಾದಾತ್ಮಕ ಬಾಂಡ್‌ಗಳ ಕುರಿತು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದಾಗ ಅವರ ಕೈಗಳು ನಡುಗುತ್ತವೆ. ಕೇಂದ್ರ ಸರ್ಕಾರ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಕೋಲಾರ ಜಿಲ್ಲೆ ಮಾಲೂರಿನಲ್ಲಿ ಬುಧವಾರ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪ್ರಜಾಧ್ವನಿ-೨ ಸಮಾವೇಶ ಉದ್ಘಾಟಿಸಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಕೆಲ ದಿನಗಳ ಹಿಂದೆ ಮೋದಿ ಅವರ ಸಂದರ್ಶನ ಕೇಳಿರಬಹುದು. ಸುಮಾರು ಒಂದು ಗಂಟೆ ಸಂಭಾಷಣೆಯಲ್ಲಿ ಚುನಾವಣಾ ಬಾಂಡ್ ಕುರಿತು ಅವರು ಸಮಜಾಯಿಷಿ ಕೊಡುವ ಕೆಲಸ ಮಾಡುತ್ತಿದ್ದರು. ಗೂಗಲ್‌ನಲ್ಲಿ ಆ ಒಂದೂವರೆ ಗಂಟೆಯ ಸಂಭಾಷಣೆ ಲಭ್ಯವಿದೆ. ಎಲೆಕ್ಷನ್ ಬಾಂಡ್ ವಿಚಾರ ಕುರಿತು ಮಾತನಾಡುವ ಸಂದರ್ಭದಲ್ಲಿ ಅವರ ಕೈ ನಡುಗುತ್ತಿತ್ತು ಎಂದು ರಾಹುಲ್‌ ಹೇಳಿದರು.

ಮೋದಿ ಅವರು ಚುನಾವಣಾ ವ್ಯವಸ್ಥೆಯಲ್ಲಿ ಬಾಂಡ್ ಮೂಲಕ ರಾಜಕೀಯದಲ್ಲಿ ಸ್ವಚ್ಛತೆ ಬರುತ್ತದೆ ಎನ್ನುತ್ತಾರೆ. ಆದರೆ ಈ ಬಾಂಡ್‌ಗಳನ್ನು ಯಾರಿಂದ ಪಡೆದರು, ಎಲ್ಲಿ ಖರ್ಚು ಮಾಡಿದರು ಎನ್ನುವುದನ್ನು ಮುಚ್ಚಿಟ್ಟಿದ್ದಾರೆ. ಸುಪ್ರೀಂಕೋರ್ಟ್ ಕೂಡ ಎಚ್ಚರಿಕೆ ನೀಡಿದ ಬಳಿಕ ಅವರು ಬಾಂಡ್‌ಗಳ ವಸೂಲಿ ನಿಲ್ಲಿಸಿದರು ಎಂದರು.

ಯಾವುದೇ ಕಂಪನಿ ಗುತ್ತಿಗೆಯ ಆದೇಶ ಪಡೆದಾಗ ಬಿಜೆಪಿಗೆ ಸಾವಿರಾರು ಕೋಟಿ ರುಪಾಯಿ ನೀಡಬೇಕಾಗುತ್ತದೆ. ಸರ್ಕಾರವು ಉದ್ಯಮಿಗಳಿಗೆ ಬೆದರಿಸಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದೆ. ಹಣ ಕೊಡದವರ ಮೇಲೆ ಐಟಿ, ಇಡಿ ದಾಳಿ ನಡೆಸಲಾಗುತ್ತದೆ. ಹಣ ಪಾವತಿಯಾದ ಬಳಿಕ ತನಿಖೆ ಮುಚ್ಚಿಹಾಕಲಾಗುತ್ತದೆ. ಇದನ್ನು ನಾವು ಬೀದಿಬದಿಯಲ್ಲಿ ಹಫ್ತಾ ವಸೂಲಿ ಎಂದು ಕರೆಯುತ್ತೇವೆ. ಪುಡಿ ರೌಡಿಗಳು ಹೆದರಿಸಿ, ಬೆದರಿಸಿ ಈ ಕೆಲಸ ಮಾಡುತ್ತಾರೆ. ಇದೇ ಕೆಲಸವನ್ನು ಕೇಂದ್ರ ಸರ್ಕಾರವೂ ಮಾಡುತ್ತಿದೆ. ಇದೇ ಕಾರಣಕ್ಕೆ ಮೋದಿ ಅವರ ಕೈಗಳು ನಡುಗುತ್ತವೆ ಎಂದು ರಾಹುಲ್‌ ಆರೋಪಿಸಿದರು.

2 ಉದ್ಯಮಿಗಳ ಪರ ಸರ್ಕಾರ:

ದೇಶದಲ್ಲಿ ಶೇ.10ರಷ್ಟಿರುವ ಬಂಡವಾಳಶಾಹಿಗಳ ಪರವಾಗಿರುವ ಪ್ರಧಾನಿ ಮೋದಿ ಅವರು ದೇಶದ ಸಂಪತ್ತಾದ ಶೇ.೯೦ರಷ್ಟು ಜನಸಾಮಾನ್ಯರ ಹಿತ ನಿರ್ಲಕ್ಷಿಸಿ ಅನ್ಯಾಯಮಾಡಿದ್ದಾರೆ. ಮೋದಿ ಅವರು ಕೇವಲ 22 ಖ್ಯಾತ ಉದ್ಯಮಿಗಳಿಗಾಗಿ ಕೇಂದ್ರ ಸರ್ಕಾರ ನಡೆಸುತ್ತಿದ್ದಾರೆ. ದೇಶದ ಈ 22 ಪ್ರಭಾವಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ, ಕಾರ್ಮಿಕರ, ಶೋಷಿತರ ಸಾಲ ಮನ್ನಾ ಮಾಡಲು ಹಿಂಜರಿಯುತ್ತಾರೆ. ಇವರು ಮನ್ನಾ ಮಾಡಿರುವ ಉದ್ಯಮಿಗಳ ಸಾಲದ ಮೊತ್ತದಲ್ಲಿ ಇನ್ನೂ 24 ವರ್ಷ ಕಾಲ 70 ಕೋಟಿ ಸಾಮಾನ್ಯ ಸಾಲ ಮನ್ನಾ ಮಾಡಬಹುದಾಗಿದೆ ಎಂದರು.ದೇಶದ ಪ್ರಮುಖ ಐಎಎಸ್ ಅಧಿಕಾರಿಗಳ ಪಟ್ಟಿ ನೋಡಿದಾಗ ಅಚ್ಚರಿಯಾಗುತ್ತದೆ. ೯೦ ಐಎಎಸ್ ಅಧಿಕಾರಿಗಳಲ್ಲಿ ಶೇ.50 ರಷ್ಟು ಇರಬೇಕಾದ ಒಬಿಸಿಯಿಂದ ಕೇವಲ ೩ ಜನರಿದ್ದಾರೆ. ಶೇ.15ರಷ್ಟು ಇರುವ ದಲಿತ ಸಮುದಾಯದ ಒಬ್ಬರು ಹಾಗೂ ಅದಿವಾಸಿ ಸಮುದಾಯದಿಂದ ಒಬ್ಬರಿದ್ದಾರೆ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಈ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದ್ದು, ಕಾಂಗ್ರೆಸ್‌ ಮತ್ತು ಐಎನ್‌ಡಿಐಎ ಒಕ್ಕೂಟವು ಸಂವಿಧಾನ ರಕ್ಷಣೆಗಾಗಿ ಹೋರಾಡುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿಯು ಸಂವಿಧಾನವನ್ನು ತೆಗೆದುಹಾಕಲು ಹೊರಟಿದೆ. ಮೋದಿ ಸರ್ಕಾರವು ಅವರ ಸ್ನೇಹಕೂಟಕ್ಕಷ್ಟೇ ಸಾಲ ಮನ್ನಾ ಮಾಡಿದರೆ, ನಾವು ರೈತರ ಸಾಲ ಮನ್ನಾ ಮಾಡುತ್ತೇವೆ. ಯುವಕರಿಗೆ ಉದ್ಯೋಗದ ಖಾತ್ರಿ ನೀಡುತ್ತೇವೆ ಎಂದು ರಾಹುಲ್‌ ಇದೇ ವೇಳೆ ಭರವಸೆ ನೀಡಿದರು.

ಜೆಡಿಎಸ್‌ ಬಿಟೀಎಂ ಎನ್ನುವುದು ನಿಜವಾಯ್ತು: ರಾಹುಲ್‌

ಬಿಜೆಪಿ ಬಿ-ಟೀಂ ಜೆಡಿಎಸ್‌ ಎಂದು ನಾವು ಎಂದೋ ಹೇಳಿದ್ದ ಮಾತು ಈಗ ಸತ್ಯವಾಗಿದೆ. ಅಂದು ಅದನ್ನು ಒಪ್ಪಿಕೊಳ್ಳಲು ಜೆಡಿಎಸ್‌ ಸಿದ್ಧವಿರಲಿಲ್ಲ. ಆದರೆ ಈಗ ಬಿಜೆಪಿಯನ್ನೇ ಜೆಡಿಎಸ್‌ ಅಪ್ಪಿಕೊಂಡಿದೆ ಎಂದು ರಾಹುಲ್‌ಗಾಂಧಿ ಕುಟುಕಿದರು.

2018ರ ಚುನಾವಣಾ ಸಂದರ್ಭದಲ್ಲೇ ಜೆಡಿಎಸ್‌ ಬಿಜೆಪಿ ಜೊತೆ ಸೇರಿಕೊಂಡಿತ್ತು. ಅದನ್ನು ತಿಳಿದೇ ನಾವು ಬಿಜೆಪಿಯ ಬಿ-ಟೀಂ ಜೆಡಿಎಸ್‌ ಎಂದಿದ್ದೆವು. ಅದರಂತೆ ಈಗ ಎ-ಟೀಂ ಜತೆಗೆ ಬಿ-ಟೀಂ ಸೇರಿಕೊಂಡು ಮಜವಾಗಿರುವುದನ್ನು ನೋಡುತ್ತಿದ್ದೇವೆ. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಲು ನಮ್ಮ ಮುಂದೆ ಬಂದಿದ್ದಾರೆ ಎಂದು ಜೆಡಿಎಸ್-ಬಿಜೆಪಿಯನ್ನು ಅಣಕಿಸಿದರು.