ರಾಹುಲ್ ಗಾಂಧಿಗೆ ತಿಳಿವಳಿಕೆ ಬರೋದಿಲ್ಲ ಪ್ರಹ್ಲಾದ್ ಜೋಶಿ

| Published : Feb 16 2024, 01:49 AM IST

ರಾಹುಲ್ ಗಾಂಧಿಗೆ ತಿಳಿವಳಿಕೆ ಬರೋದಿಲ್ಲ ಪ್ರಹ್ಲಾದ್ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೇ ನಿಯಮ ಎಲ್ಲ ಕಡೆ ಅನ್ವಯ ಆಗುವುದಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ನಮ್ಮ ನಾಯಕರು ಬದಲಾವಣೆ ಮಾಡುತ್ತಾರೆ. ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೋ ಅವರಿಗೆ ಖಂಡಿತ ಟಿಕೆಟ್ ಕೊಡುತ್ತಾರೆ

ಧಾರವಾಡ: ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಜಾತಿನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಲವು ಬಾರಿ ಮೋದಿ ಅವರ ಬಗ್ಗೆ ಜಾತಿನಿಂದನೆ ಮಾಡಿದ್ದಾರೆ. ದುರ್ದೈವ ಅವರಿಗೆ ತಿಳಿವಳಿಕೆಯೇ ಬರೋದಿಲ್ಲ. ಈಗಾಗಲೇ ಈ ರೀತಿ ಮಾತನಾಡಿ ಎರಡು ವರ್ಷ ಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ ಅದಕ್ಕೆ ತಡೆ ಆಗಿದೆ. ಸುಪ್ರೀಂಕೋರ್ಟ್ ತಡೆ ನೀಡುವಾಗ, ಯಾರು ತಮ್ಮನ್ನು ತಾವು ನಾಯಕರೆಂದು ಕರೆದುಕೊಳ್ಳುತ್ತಾರೋ ಅಂತವರು ಮಾತನಾಡುವಾಗ ಭಾಷೆ ಮೇಲೆ ಮತ್ತು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡಿರಬೇಕು ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಆದರೂ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಜನ ಅವರಿಗೆ ಬುದ್ದಿ ಕಲಿಸಿದ್ದಾರೆ. ಮಮತಾ ಬ್ಯಾನರ್ಜಿ ಹೇಳಿದಂತೆ ಅವರು ಇದೇ ರೀತಿ ಮಾತನಾಡುತ್ತ ಹೋಗಲಿ. ಅವರು ಸಂಸದರ ಸಂಖ್ಯೆ 40 ಕ್ಕಿಂತ ಕಡಿಮೆಯಾಗಲಿ ಎಂದರು.

ಲೋಕಸಭೆಗೆ ಹೊಸಬರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದೇ ನಿಯಮ ಎಲ್ಲ ಕಡೆ ಅನ್ವಯ ಆಗುವುದಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ನಮ್ಮ ನಾಯಕರು ಬದಲಾವಣೆ ಮಾಡುತ್ತಾರೆ. ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೋ ಅವರಿಗೆ ಖಂಡಿತ ಟಿಕೆಟ್ ಕೊಡುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರು ಗೂಂಡಾಗಳಿದ್ದಂತೆ ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಯಾವ ಪಕ್ಷದಲ್ಲಿ ಎಷ್ಟು ಗೂಂಡಾಗಳಿದ್ದಾರೆ ಎಂಬುದು ಗೊತ್ತಿದೆ. ಅವರ ಭಾಷೆ ಮತ್ತು ನಾಲಿಗೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದರು.