ಗೌರಿ ಲಂಕೇಶ್‌ ಪ್ರಕರಣದಲ್ಲಿ ರಾಹುಲ್‌ಗೆ 500 ರು. ದಂಡ

| Published : Jan 20 2024, 02:00 AM IST

ಸಾರಾಂಶ

ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿಗೆ ಥಾಣೆ ನ್ಯಾಯಾಲಯ 500 ರು. ದಂಡ ವಿಧಿಸಿದೆ.

ಥಾಣೆ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಹೇಳಿಕೆ ನೀಡಲು ತಡ ಮಾಡಿದ್ದಕ್ಕೆ ಥಾಣೆ ನ್ಯಾಯಾಲಯ 500 ರು. ದಂಡ ವಿಧಿಸಿದೆ.

ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸಿ ಆರ್‌ಎಸ್ಎಸ್‌ ಕಾರ್ಯಕರ್ತ ವಿವೇಕ್‌ ಚಂಪಾನೇಕರ್‌ ಸಿವಿಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಬಗ್ಗೆ ಹೇಳಿಕೆ ನೀಡುವಂತೆ ರಾಹುಲ್‌ ಗಾಂಧಿಗೆ ಕೋರ್ಟ್‌ ನೋಟಿಸ್‌ ನೀಡಿತ್ತು. ಈ ಬಗ್ಗೆ ರಾಹುಲ್ ವಕೀಲರು ಲಿಖಿತ ವರದಿಯನ್ನು ಸಲ್ಲಿಸಿ, ತಮ್ಮ ಕಕ್ಷಿದಾರ ಸಂಸದರಾಗಿರುವ ಕಾರಣ ದೇಶಾದ್ಯಂತ ಪ್ರವಾಸ ಕೈಗೊಳ್ಳಬೇಕಾಗಿದೆ.

ಹೀಗಾಗಿ ಹೇಳಿಕೆ ನೀಡುವುದು ತಡವಾಗಿದೆ ಎಂದು ಹೇಳಿ ಕೋರ್ಟ್‌ನ ಕ್ಷಮೆ ಕೇಳಿದ್ದರು. 881 ದಿನಗಳ ವಿಳಂಬವನ್ನು ಕ್ಷಮಿಸಿದ ನ್ಯಾಯಾಲಯ, ಹೇಳಿಕೆಯನ್ನು ಸ್ವೀಕರಿಸಿ 500 ರು. ದಂಡ ವಿಧಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿದೆ.