ಸಾರಾಂಶ
ಹೊಸಕೋಟೆ: ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಜಾತಿಯ ಹೆಸರಿನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ತ.ರಾ.ವೆಂಕಟೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂದು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಅಸಂಬದ್ಧ ಹೇಳಿಕೆ ನೀಡಿ ಪ್ರಧಾನಿ ನರೇಂದ್ರ ಮೋದಿಯವರ ಜಾತಿ ಪ್ರಶ್ನೆ ಮಾಡಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ವಿನಾಕಾರಣ ಸಮುದಾಯವನ್ನು ಟೀಕಿಸಿ ಪ್ರಧಾನಿಗಳ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಪ್ರಮುಖವಾಗಿ ಚುನಾವಣೆ ಸಂದರ್ಭದಲ್ಲಿ ಮೋದಿ ಅವರ ಜಾತಿ ಪ್ರಶ್ನೆ ಮಾಡುವ ಮೂಲಕ ತಮ್ಮನ್ನು ಒಬಿಸಿ ನಾಯಕ ಎಂದು ಬಿಂಬಿಸಿಕೊಳ್ಳಲು ರಾಹುಲ್ ಗಾಂಧಿ ಪ್ರಯತ್ನ ಮಾಡುತ್ತಿದ್ದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದರು.ನರೇಂದ್ರ ಮೋದಿ ಅವರು ತೇಲಿ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ಮೇಲ್ಜಾತಿಯ ಜನಾಂಗವಾಗಿದೆ. ಆದ್ದರಿಂದ ಅವರು ದೇಶದಲ್ಲಿ ಜಾತಿ ಗಣತಿ ಮಾಡಲು ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ವತಿಯಿಂದ ಕೇಂದ್ರ ಸರ್ಕಾರ ಹೊರಡಿಸಿದ ಗೆಜೆಟ್ ಅನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ರಾಜಕೀಯವಾಗಿ ಬೇಳೆ ಬೆಳೆಸಿಕೊಳ್ಳಲು ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವುದನ್ನು ಬಿಟ್ಟು ಅಭಿವೃದ್ಧಿ ಪರವಾಗಿ ಮತ ಕೇಳುವಂತಾಗಬೇಕು. ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಒಬಿಸಿ ಪರವಾಗಿಯೇ ಇರುವುದಾದರೆ ಕರ್ನಾಟಕ ರಾಜ್ಯದಲ್ಲಿ ಕಾಂತರಾಜು ವರದಿಯನ್ನು ಏಕೆ ಸ್ವೀಕಾರ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬಿಜೆಪಿ ಮುಖಂಡರಾದ ಬಾಲಚಂದ್ರ, ಮುನಿನಂಜಪ್ಪ ಇತರರು ಹಾಜರಿದ್ದರು.ಬಾಕ್ಸ್.............
ರಾಜ್ಯಸಭೆಗೆ ಅಜಯ್ ಮಾಕನ್ ಕಣಕ್ಕೆ:ಎಲ್ಲಿ ಹೋಯ್ತು ಕಾಂಗ್ರೆಸ್ ನಾಯಕರ ಬದ್ದತೆ?
ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಘೋಷಿಸುವ ಸಂದರ್ಭದಲ್ಲಿ ದೆಹಲಿ ಮೂಲದ ಅಜಯ್ ಮಾಕನ್ ಅವರನ್ನು ಕಣಕ್ಕಿಳಿಸಿದೆ. ತೆರಿಗೆ ಹಂಚಿಕೆಯಲ್ಲಿ ಮೋಸವಾಗಿದೆ ಎಂದು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಲ್ಲಾ ಶಾಸಕರ ಜೊತೆ ಹೋಗಿ ಪ್ರತಿಭಟನೆ ಮಾಡುವ ವೇಳೆ ಉತ್ತರ ಭಾರತದವರಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ದೊಡ್ಡ ದೊಡ್ಡ ಭಾಷಣ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದರು. ಆದರೆ ಈಗ ರಾಜ್ಯಸಭೆಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿ ಮೂಲದ ಅಜಯ್ ಮಾಕನ್ ಅವರನ್ನು ಕಣಕ್ಕಿಳಿಸಿದೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ದೆಹಲಿಯವರೆಗೂ ಹೋಗಿ ಪ್ರತಿಭಟನೆ ಮಾಡುವಾಗ ರಾಜ್ಯದ ಹಕ್ಕಿಗಾಗಿ ಇದ್ದ ನಿಮ್ಮ ಬದ್ಧತೆ, ರಾಜ್ಯಸಭೆಗೆ ಪ್ರತಿನಿಧಿಯನ್ನು ಕಳಿಸುವಾಗ ಎಲ್ಲಿ ಹೋಯಿತು. ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಉತ್ತರ ಕೊಡಬೇಕು? ಉತ್ತರ ಭಾರತದವರಿಂದ ಅನ್ಯಾಯವಾಗುತ್ತಿದೆ ಎಂದು ದೇಶವನ್ನೇ ಒಡೆಯುವ ಮಾತನಾಡುವಾಗ ಇದ್ದ ನಿಮ್ಮ ಆಕ್ರೋಶ ಉತ್ತರ ಭಾರತದವರನ್ನೆ ರಾಜ್ಯದ ಪ್ರತಿನಿಧಿ ಮಾಡುವಾಗ ಎಲ್ಲಿ ಹೋಯ್ತು ನಿಮ್ಮ ಆಕ್ರೋಶ ಎಂದು ಬಿಜೆಪಿದೊಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ತ.ರಾ.ವೆಂಕಟೇಶ್ ಕಿಡಿ ಕಾರಿದರು.ಫೋಟೋ : 18 ಹೆಚ್‌ಎಸ್‌ಕೆ 1
ಹೊಸಕೋಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಾರಾ ವೆಂಕಟೇಶ್ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.