ಸಾರಾಂಶ
ಬೆಳಗಾವಿ : ಗಾಂಧಿ ಭಾರತ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಿರ್ಣಯ ಮಾಡಿದ ಹಾಗೆ ಯಥಾ ಪ್ರಕಾರ ಕಾರ್ಯಕ್ರಮ ನಡೆಯಲಿದೆ. ಜ.21ಕ್ಕೆ ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಲೋಕಾರ್ಪಣೆ ಮಾಡಲಾಗುವುದು. ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದ ಅವರು, ಸರ್ಕಾರಿ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲ ಶಾಸಕ, ಸಚಿವರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಭಾಗಿಯಾಗುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ನಾನು ಹೇಳಿಲ್ಲ. ಈ ಕುರಿತು ಈಗಾಗಲೆ ಸ್ಪಷ್ಟನೆ ಕೊಟ್ಟಿದ್ದೇನೆ. ಅಧ್ಯಕ್ಷರ ಬದಲಾವಣೆ ನಾವು ಯಾರೂ ಅಧಿಕೃತವಲ್ಲ. ಬದಲಾವಣೆ ಮಾಡುವುದು, ಬಿಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸುರ್ಜೇವಾಲಾ ಅವರು ಟೈಂ ಕೊಟ್ಟಿದ್ದರೂ ಎಲ್ಲರೂ ಸಹ ಸುರ್ಜೇವಾಲ ಅವರೊಂದಿಗೆ ಮಾತನಾಡಿದ್ದಾರೆ. ನಾಳೆ ಸುರ್ಜೇವಾಲ ಬೆಳಗಾವಿಗೆ ಬರುತ್ತಾರೆ. ಕಾಂಗ್ರೆಸ್ ಸಮಾವೇಶದ ಕುರಿತು ಚಿಕ್ಕೋಡಿ, ಬೆಳಗಾವಿ ಕ್ಷೇತ್ರದ ಸಭೆ ಮಾಡುತ್ತಾರೆ.ಕಾಂಗ್ರೆಸ್ ಕಟ್ಟಡ ವಿಚಾರ ಎಲ್ಲರಿಗೂ ಶ್ರೇಯಸ್ಸು ಸೇರಬೇಕು. ಅದರ ಕ್ರೆಡಿಟ್ ಎಲ್ಲರಿಗೂ ಸೇರಬೇಕು ಎಂದರು.
ಉಗ್ರ ರೂಪ ತಾಳುವುದು ಒಳ್ಳೆಯದಲ್ಲ: ಸಿಎಲ್ ಪಿ ಸಭೆಯಲ್ಲಿ ಮಾತನಾಡಿದ್ದಕ್ಕೆ ರಮೇಶ ಅಭಿನಂದನೆ ಸಲ್ಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಕಾಂಗ್ರೆಸ್ ಕಚೇರಿಗೆ ರಮೇಶ ಜಾರಕಿಹೊಳಿ ಅವರ ಕಾಂಟ್ರಿಬ್ಯುಶನ್ ಸಹ ಇದೆ. ಇದಕ್ಕೆ ಬಹಳಷ್ಟು ಜನರ ಸಹಕಾರ ಇದೆ. ಅದರ ಶ್ರೇಯಸ್ಸು ಎಲ್ಲರಿಗೂ ಸಲ್ಲುತ್ತದೆ ಎಂದ ಅವರು, ನಾವು ಎಷ್ಟು ಸೌಮ್ಯ ಇರ್ತಿವಿ ಅಷ್ಟು ಒಳ್ಳೆದಾಗುತ್ತೆ ಉಗ್ರ ರೂಪ ತಾಳುವುದು ಒಳ್ಳೆದಲ್ಲ ಎಂದು ಉಗ್ರರೂಪ ತಾಳಿದರೆ ಮಾತ್ರ ಅಧಿಕಾರ ಎಂಬ ಸಹೋದರ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಒಟ್ಟಿಗೆ ಬಂದ ಡಿಕೆ ಸುರೇಶ, ಸತೀಶ ಜಾರಕಿಹೊಳಿ: ರಾಜ್ಯ ರಾಜಕೀಯದಲ್ಲಿ ಪವರ್ ಶೇರ್ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಾಗಿ ಡಿಸಿಎಂ ಡಿಕೆಶಿವಕುಮಾರ್ ಹಾಗೂ ಸಚಿವ ಸತೀಶ ಜಾರಕಿಹೊಳಿ ಮಧ್ಯೆ ಜಟಾಪಟಿ ನಡೆದಿರುವ ಮಧ್ಯೆಯೇ ಗುರುವಾರ ಡಿಕೆಶಿ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ಆಗಮಿಸಿ ರಹಸ್ಯ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸಂಜೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿ ಇಬ್ಬರು ಕೂಡಿಯೇ ನಗುತ್ತಲೇ ಇಬ್ಬರು ನಾಯಕರು ಹೊರಬಂದರು. ಇದಕ್ಕೂ ಮುನ್ನ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಸುಮಾರು 10 ನಿಮಿಷ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.