ಮೇ.2ಕ್ಕೆ ಶಿವಮೊಗ್ಗಕ್ಕೆ ರಾಹುಲ್‌ ಗಾಂಧಿ: ಸಚಿವ ಮಧುಬಂಗಾರಪ್ಪ

| Published : Apr 27 2024, 01:18 AM IST

ಮೇ.2ಕ್ಕೆ ಶಿವಮೊಗ್ಗಕ್ಕೆ ರಾಹುಲ್‌ ಗಾಂಧಿ: ಸಚಿವ ಮಧುಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಹಿಂದೆಂದೂ ಕಾಣದ ರೀತಿಯಲ್ಲಿ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ನಾಯಕ ರಾಹುಲ್‍ ಗಾಂಧಿ ಮೇ.2ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ನಗರದ ಫ್ರೀಡಂ ಪಾರ್ಕ್‍ನಲ್ಲಿ ಗೀತಾ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 12 ರಿಂದ 1.30ರವರೆಗೆ ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ ಮತ್ತು ಶಿವಮೊಗ್ಗ ನಗರ ನಾಲ್ಕು ತಾಲೂಕು ಭಾಗದ ಮತದಾರರು ಭಾಗಿಯಾಗಲಿದ್ದಾರೆ ಎಂದರು.

ಅಲ್ಲದೆ ಫಿಲಂ ಛೇಂಬರ್‌ನವರು ಕೂಡ ಇದೇ ಮೊದಲ ಬಾರಿಗೆ ಗೀತಾಗೆ ಬೆಂಬಲ ವ್ಯಕ್ತಪಡಿಸಿದ್ದು, ಅನೇಕ ನಾಯಕ ನಟರು, ನಟಿಯರು ಮತ್ತು ಚಿತ್ರತಂಡದ ಪ್ರಮುಖರು ಕ್ಷೇತ್ರದ 8 ತಾಲೂಕಿನಲ್ಲಿ ಪತ್ರಿಕಾಗೋಷ್ಠಿ ಮತ್ತು ರೋಡ್‍ಶೋ ಮೂಲಕ ಗೀತಕ್ಕನ ಪರ ವ್ಯಾಪಕ ಪ್ರಚಾರ ಮಾಡಲಿದ್ದಾರೆ. ನಾವು ಅವರಿಗೆ ಒತ್ತಾಯಿಸಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ಬರುತ್ತಿದ್ದು, ಇನ್ನೂ ಅನೇಕ ಚಿತ್ರರಂಗದ ಪ್ರಮುಖರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ನಟ ದುನಿಯಾ ವಿಜಿ, ಡಾಲಿ ಧಜಂಜಯ್, ಸತ್ಯ, ಚಿಕ್ಕಣ್ಣ, ವಿಜಯರಾಘವೇಂದ್ರ, ನೆನಪಿರಲಿ ಪ್ರೇಮ್, ನಿಶ್ವಿಕಾನಾಯ್ಡು, ಚಂದನಶೆಟ್ಟಿ, ಅನುಶ್ರೀ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದರು.

ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಹಿಂದೆಂದೂ ಕಾಣದ ರೀತಿಯಲ್ಲಿ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಬದಲಾವಣೆ ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಎಲ್ಲಾ ವರ್ಗದ ಜನ ಅಭಿನಂದಿಸುತ್ತಿದ್ದಾರೆ. ಈಗಾಗಲೇ ಗ್ಯಾರಂಟಿ ಕಾರ್ಡ್‍ಗಳ ವಿತರಣೆ ಕಾರ್ಯ ಮುಗಿದಿದೆ. 3ನೇ ಹಂತದ ಪ್ರಚಾರಕ್ಕೆ ಕಾಲಿಟ್ಟಿದ್ದೇವೆ. ಬಿಜೆಪಿ ಪ್ರಚಾರಕ್ಕೆ ಹೋಲಿಸಿದರೆ ನಮ್ಮ ಪ್ರಚಾರವೇ ಜಾಸ್ತಿ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್, ಪ್ರಮುಖರಾದ ಸುವರ್ಣ ನಾಗರಾಜ್, ಚಿನ್ನಪ್ಪ, ಶಮಂತ್, ಜಿತೇಂದ್ರ ಸೇರಿದಂತೆ ಹಲವರಿದ್ದರು.