ಆಗಸ್ಟ್‌ 5ರಂದು ಬೆಂಗಳೂರಲ್ಲಿ ರಾಹುಲ್ ನೇತೃತ್ವದಲ್ಲಿ ಧರಣಿ

| Published : Aug 04 2025, 12:15 AM IST

ಸಾರಾಂಶ

ಚುನಾವಣಾ ಆಯೋಗವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡಿದೆಯೆಂಬುದನ್ನು ಜನರಿಗೆ ತಿಳಿಸಲು ನಮ್ಮ ಮತ ನಮ್ಮ ಅಧಿಕಾರ, ಸಂವಿಧಾನ ಉಳಿಸಿ, ಸಂವಿಧಾನ ರಕ್ಷಿಸಿ ಘೋಷಣೆಯಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ.5ರಂದು ಬೆಳಿಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನವಾಗಿದ್ದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡಿದೆಯೆಂಬುದನ್ನು ಜನರಿಗೆ ತಿಳಿಸಲು ನಮ್ಮ ಮತ ನಮ್ಮ ಅಧಿಕಾರ, ಸಂವಿಧಾನ ಉಳಿಸಿ, ಸಂವಿಧಾನ ರಕ್ಷಿಸಿ ಘೋಷಣೆಯಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ.5ರಂದು ಬೆಳಿಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರು, ಶಾಸಕರು, ಎಂಎಲ್‌ಸಿ, ಸಂಸದರು, ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸುವರು ಎಂದರು.

2024ರ ಲೋಕಸಭಾ ಚುವಣಾವಣೆಯಲ್ಲಿ ಬೆಂಗಳೂರಿನ ಕೇಂದ್ರ ಕ್ಷೇತ್ರದ ವ್ಯಾಪ್ತಿಯ ಮಹಾದೇವಪುರ, ರಾಜಾಜಿ ನಗರ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಮತಗಳ ದುರ್ಬಳಕೆಯಾಗಿದೆ. ಅದಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮೊದಲ ಹಂತದ ಹೋರಾಟವನ್ನು ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸುವ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಹುಲ್‌ ಗಾಂಧಿ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಕೇಂದ್ರದ ಕೈಗೊಂಬೆಯಾದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಬೆಂಗಳೂರಿನ ಲೋಕಸಭಾ ಕ್ಷೇತ್ರದಲ್ಲಿ 28 ಲಕ್ಷ ಮತದಾರರು 5-6 ತಿಂಗಳಲ್ಲಿ ಹೆಚ್ಚಳವಾಗಿದ್ದಾರೆ. ಕೇಂದ್ರ ಬಿಜೆಪಿಯ ಸರ್ಕಾರ ಪ್ರಜಾಪ್ರಭುತ್ವವನ್ನು ನಿರ್ನಾಮ ಮಾಡಲು ಹೊರಟಿದೆ. ಇದೇ ವರ್ಷ ನಡೆ ಯುವ ಬಿಹಾರ ವಿಧಾನಸಭಾ ಚುನಾವಣೆಗೆ ಈಗಾಗಲೇ 65 ಲಕ್ಷ ಆಕ್ರಮ ಮತದಾರರನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯ ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ದೊಡ್ಡ ಹೋರಾಟವನ್ನು ರಾಜ್ಯದಲ್ಲಿ ಪ್ರಾರಂಭಿಸುವ ಮೂಲಕ ಆಯೋಗಕ್ಕೆ ಎಚ್ಚರಿಕೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟ ನಡೆಸಲಾಗುವುದು. ಅಂದು ನಡೆಯುವ ಪ್ರತಿಭಟನೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಮತ ಕಳ್ಳತನ ಯಾವ ರೀತಿ ನಡೆದಿದೆಯಂಬ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಂತೆ ಕೇಂದ್ರ ಚುನಾವಣೆ ಆಯೋಗವನ್ನೂ ನರೇಂದ್ರ ಮೋದಿ ಹಾಗೂ ಬಿಜೆಪಿ ದುರ್ಬಳಕೆ ಮಾಡಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟುಬಿದ್ದಿದೆ. ಚುನಾವಣೆಗಳಲ್ಲಿ ಪಾರದರ್ಶಕತೆ ಕಾಪಾಡಲು ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೊಡ್ಡ ಹೋರಾಟವನ್ನು ಹಂತ ಹಂತವಾಗಿ ದೇಶವ್ಯಾಪಿ ಮಾಡಲಿದೆ ಎಂದರು.

ಪಕ್ಷದ ಮುಖಂಡರಾದ ಅಲ್ಲಾವಲಿ ಮುಜಾಹಿದ್‌ಖಾನ್, ಡಿ.ಶಿವಕುಮಾರ, ಬಿ.ಎಸ್.ಸುರೇಶ, ಸಿ.ರಮೇಶ್ ಇದ್ದರು.