ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸನಾತನ ಹಿಂದೂ ಧರ್ಮ ಹಾಗೂ ಹಿಂದುತ್ವ ಪ್ರತಿಪಾದಕರು ಭಯೋತ್ಪಾದಕರು ಎಂದಿರುವ ರಾಹುಲ್‌ಗಾಂಧಿ ಅವರ ಹೇಳಿಕೆ ಅಪ್ರಬುದ್ಧ, ಬಾಲಿಷತನದ್ದು ಎಂದು ಶಾಸಕ ಧೀರಜ್ ಮುನಿರಾಜು ತೀವ್ರವಾಗಿ ಖಂಡಿಸಿದರು.ಜಿಲ್ಲಾ ಬಿಜೆಪಿಯಿಂದ ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ನಡೆದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದಲ್ಲಿ ನಿಂತು ಈ ನೆಲದ ಸನಾತನ ಧರ್ಮದ ಬಗ್ಗೆ ವಿಷಕಾರುವ ಹೇಳಿಕೆ ನೀಡಿರುವ ರಾಹುಲ್‌ಗಾಂಧಿ ಅವರು ವಿಶ್ವದಾದ್ಯಂತ ಇರುವ ಹಿಂದೂ ಬಾಂಧವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಹಿಂದೂಗಳ ಅತ್ಯಂತ ಪೂಜನೀಯ ದೇವರಾದ ಈಶ್ವರನ ಭಾವಚಿತ್ರವನ್ನು ಹಿಡಿದು ಇಡೀ ಹಿಂದೂ ದೇವ-ದೇವತೆಗಳನ್ನು ಅವಮಾನಿಸುವ ರೀತಿ ಹೇಳಿಕೆ ನೀಡುವ ರಾಹುಲ್‌ಗಾಂಧಿ ಅವರದ್ದು ಎಷ್ಟು ಕೊಳಕು ಮನಸ್ಥಿತಿಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಮಾನಸಿಕತೆಯನ್ನು ಅನಾವರಣಗೊಳಿಸುತ್ತದೆ ಎಂದು ಜರಿದರು.ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮವು ಪವಿತ್ರ ಗಂಗೆಯಂತೆ ಎಲ್ಲರನ್ನೂ ಬರದಪ್ಪಿ ತನ್ನೊಳಗೆ ಸ್ಥಾನ ನೀಡುವ ಮಹತ್ವದ ಧರ್ಮವಾಗಿದೆ. ಹಿಂದೂ ಧರ್ಮದ ಅನುಯಾಯಿಗಳನ್ನು ನಿಂದಿಸುವ ಈ ಹೇಳಿಕೆಯು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ ಎಂದರು.
ಇಡೀ ಜಗತ್ತನ್ನು ಒಂದು ಕುಟುಂಬ ಎಂದು ಮಂತ್ರ ಪಟಿಸಿದ ಭಾರತದ ಮೂಲ ನಿವಾಸಿಗಳಾದ ಹಿಂದೂಗಳು ಮತ್ತೊಬ್ಬರನ್ನು ಭಯಭೀತರನ್ನಾಗಿಸುವುದಿಲ್ಲ. ವಸುದೈವ ಕುಟುಂಬಕಂ ಹಿಂದೂ ಧರ್ಮದ ಉತ್ಕೃಷ್ಟ ವಿಚಾರವಾಗಿದೆ. ಇದನ್ನು ತಿಳಿಯದ ರಾಹುಲ್‌ಗಾಂಧಿ ಎಲ್ಲ ಸಮುದಾಯದ ಜನ ಹಿತ ಬಯಸುವ ಮಾನವ ಕುಲಕ್ಕೆ ದಾರಿದೀಪದಂತಿರುವ ಹಿಂದುತ್ವದ ಬಗ್ಗೆ ರಾಹುಲ್ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ಇರುವ ಹಿಂದೂಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ.ಕಾಂಗ್ರೆಸ್ ಪಕ್ಷದವರು ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಹಸಿ ಸುಳ್ಳನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಬಗ್ಗೆ ಹೇಳುತ್ತಾ ಬಂದಿದ್ದರು. ೧೪೦ ಕೋಟಿ ಜನಸಂಖ್ಯೆಯ ಭಾರತದ ಚುನಾವಣೆಯೆಂದರೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರ ಸುಳ್ಳನ್ನು ಬಯಲು ಮಾಡಲು ಭಾರತೀಯ ಜನತಾ ಪಕ್ಷವು ೨೫ ದೇಶಗಳ ರಾಜಕೀಯ ಪಕ್ಷಗಳ ಗಣ್ಯರನ್ನು ಭಾರತದ ಚುನಾವಣೆ ವೀಕ್ಷಿಸಲು ಆಹ್ವಾನಿಸಲಾಗಿತ್ತು. ವಿದೇಶಿ ರಾಜಕೀಯ ಪಕ್ಷಗಳ ಗಣ್ಯರ ವೀಕ್ಷಣೆಯಲ್ಲಿ ೨೦೨೪ರ ಲೋಕಸಭಾ ಚುನಾವಣೆಯನ್ನು ನಡೆಸುವ ಮೂಲಕ ಭಾರತದ ಪ್ರಜಾಪ್ರಭುತ್ವದ ವಿಸ್ತಾರ ಮತ್ತು ಪಾರದರ್ಶಕತೆಯನ್ನು ವಿಶ್ವಕ್ಕೆ ತೋರ್ಪಡಿಸಲಾಯಿತು. ಪಾರದರ್ಶಕ ಚುನಾವಣೆ ಇವಿಎಂಗಳ ನಿಷ್ಪಕ್ಷಪಾತ ನಿರ್ವಹಣೆ, ಚುನಾವಣಾ ಆಯೋಗದ ಶಿಸ್ತು, ಪೊಲೀಸ್, ಬಂದೋಬಸ್ತ್, ಸಾರ್ವಜನಿಕರ ಸುರಕ್ಷೆ ಮತ್ತು ಸಹಭಾಗಿತ್ವ ಪ್ರಮುಖ ಅಂಶಗಳಾಗಿವೆ ಎಂದು ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಡಾ.ಲಕ್ಷ್ಮಿ ಅಶ್ವಿನ್‌ಗೌಡ, ಮುನಿರಾಜು, ಎಸ್.ಪಿ. ಸ್ವಾಮಿ, ಅಶೋಕ್ ಜಯರಾಂ, ಕೆ.ಎಸ್.ನಂಜುಂಡೇಗೌಡ, ಇಂಡುವಾಳು ಸಚ್ಚಿದಾನಂದ, ಡಾ. ಸದಾನಂದ ಇತರರಿದ್ದರು.