ದಿಗಂತ್‌ ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಯತ್ನ: ರೈ ಆರೋಪ

| Published : Mar 14 2025, 12:30 AM IST

ಸಾರಾಂಶ

ಕರಾವಳಿಯಲ್ಲಿ ಕೋಮು ಸಂಘರ್ಷ ನಿಲ್ಲಬೇಕಾದರೆ ನಿಜವಾದ ಸೂತ್ರಧಾರರಿಗೆ ಶಿಕ್ಷೆ ಆಗಬೇಕು. ಜಿಲ್ಲೆಯಲ್ಲಿ ಇದುವರೆಗೆ ನಡೆದ ಎಲ್ಲ ಕೋಮು ಹತ್ಯೆ ಪ್ರಕರಣಗಳಲ್ಲಿ ಎಸ್‌ಐಟಿ ತನಿಖೆ ನಡೆಸಿ, ಹತ್ಯೆಗಳ ಹಿಂದಿನ ವ್ಯಕ್ತಿಗಳನ್ನು ಬಯಲಿಗೆಳೆಯಬೇಕು. ಕೇವಲ ಕಾರ್ಯಕರ್ತರನ್ನು ಶಿಕ್ಷೆಗೆ ಒಳಪಡಿಸಿದರೆ ಸಂಘರ್ಷ ನಿಲ್ಲಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಫರಂಗಿಪೇಟೆಯ ದಿಗಂತ್‌ ನಾಪತ್ತೆ ಪ್ರಕರಣದಲ್ಲಿ ಮತೀಯವಾದಿ ಸಂಘಟನೆಗಳು ಸುಳ್ಳು ಕತೆ ಕಟ್ಟಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡಿದ್ದವು. ಈ ರೀತಿ ಕೋಮು ಸಂಘರ್ಷ- ಅಶಾಂತಿ ಸೃಷ್ಟಿಗೆ ಪ್ರಯತ್ನಿಸುವ ಮುಖಂಡರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕೋಮು ಸಾಮರಸ್ಯ ಕದಡಲು ನಿರಂತರ ಪ್ರಯತ್ನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಂಬಂಧಿಸಿದ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೇಸ್‌ ಹಾಕಿದರೆ ಉಪಯೋಗವಿಲ್ಲ. ಇದಕ್ಕೆ ಮೂಲ ಪ್ರಚೋದನೆ ನೀಡುವ ಮುಖಂಡರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ದಿಗಂತ್‌ ಕೇಸಲ್ಲಿ ತಪ್ಪಿದ ಘರ್ಷಣೆ:

ದಿಗಂತ್‌ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದವರು ಕೇವಲ ನಾಪತ್ತೆ ಬಗ್ಗೆಯೇ ಮಾತನಾಡಿದ್ದರೆ ಅದು ಆದರ್ಶ ರಾಜಕಾರಣವಾಗುತ್ತಿತ್ತು. ಆದರೆ ಇಡೀ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲು ಕೆಲವರು ಪ್ರಯತ್ನಪಟ್ಟಿದ್ದರು. . ಆದರೆ ದಿಗಂತ್‌ನನ್ನು ಪೊಲೀಸರು ಸಕಾಲದಲ್ಲಿ ಪತ್ತೆ ಹಚ್ಚಿ ಸಂಭಾವ್ಯ ಕೋಮು ಘರ್ಷಣೆಯನ್ನು ತಪ್ಪಿಸಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಮುಖಂಡರಾದ ಪ್ರಕಾಶ್‌ ಸಾಲಿಯಾನ್‌, ಅಬ್ದುಲ್‌ ಲತೀಫ್‌, ಅಶೋಕ್‌ ಡಿ.ಕೆ., ವಿಕಾಸ್‌ ಶೆಟ್ಟಿ, ಇಬ್ರಾಹಿಂ ನವಾಜ್‌, ನಝೀರ್‌ ಬಜಾಲ್‌ ಮತ್ತಿತರರಿದ್ದರು.............

ಕೋಮು ಹತ್ಯೆಗಳ ಎಸ್‌ಐಟಿ ತನಿಖೆಯಾಗಲಿ

ಕರಾವಳಿಯಲ್ಲಿ ಕೋಮು ಸಂಘರ್ಷ ನಿಲ್ಲಬೇಕಾದರೆ ನಿಜವಾದ ಸೂತ್ರಧಾರರಿಗೆ ಶಿಕ್ಷೆ ಆಗಬೇಕು. ಜಿಲ್ಲೆಯಲ್ಲಿ ಇದುವರೆಗೆ ನಡೆದ ಎಲ್ಲ ಕೋಮು ಹತ್ಯೆ ಪ್ರಕರಣಗಳಲ್ಲಿ ಎಸ್‌ಐಟಿ ತನಿಖೆ ನಡೆಸಿ, ಹತ್ಯೆಗಳ ಹಿಂದಿನ ವ್ಯಕ್ತಿಗಳನ್ನು ಬಯಲಿಗೆಳೆಯಬೇಕು. ಕೇವಲ ಕಾರ್ಯಕರ್ತರನ್ನು ಶಿಕ್ಷೆಗೆ ಒಳಪಡಿಸಿದರೆ ಸಂಘರ್ಷ ನಿಲ್ಲಲ್ಲ ಎಂದು ರಮಾನಾಥ ರೈ ಒತ್ತಾಯಿಸಿದರು.