ರಾಯಚೂರು: 15 ಮಕ್ಕಳಿಗೆ ಮಂಗನಬಾವು ಕಾಯಿಲೆ

| Published : Feb 10 2024, 01:48 AM IST

ಸಾರಾಂಶ

ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಗೆ ಮುಂದಾದ ಆರೋಗ್ಯ ಇಲಾಖೆ, ಮಂಗನಬಾವು ಕಾಯಿಲೆಯಿಂದ ಅಪಾಯವಿಲ್ಲ, 10-12ದಿನಕ್ಕೆ ಗುಣವಾಗುತ್ತದೆ ಎಂದು ವೈದ್ಯರ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಮಕ್ಕಳಿಗೆ ಮಂಗನ ಬಾವು (ಗಂಟಲು ಗಳಿಗೆ) ಕಾಣಿಸಿಕೊಂಡಿದ್ದು ತಾಲೂಕ ಆರೋಗ್ಯ ಇಲಾಖೆ ಈಗಾಗಲೆ ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆ ಕೈಗೊಳ್ಳುತ್ತಿದೆ.

ಮಮ್ಸ್ ವೈರಸ್ನಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಜೀವಕ್ಕೆ ಅಷ್ಟೊಂದು ಅಪಾಯಕಾರಿಯಾಗಿಲ್ಲ. ಜೊತೆಗೆ ಗಂಟಲು ನೋವು ಕಡಿಮೆಯಾಗಲು ಚಿಕಿತ್ಸೆ ನೀಡಲಾಗುತ್ತದೆ. 10-12 ದಿನಗಳ ಬಳಿಕ ತನ್ನಷ್ಟಕ್ಕೆ ತಾನೇ ಕಡಿಮೆ ಆಗುತ್ತದೆ. ಇದಕ್ಕೆ ಔಷಧಿಯೂ ಇಲ್ಲ. ತಾಲೂಕಿನಲ್ಲಿ ಈಗಾಗಲೆ 15ಕ್ಕೂ ಅಧಿಕ ಮಕ್ಕಳಲ್ಲಿ ಮಂಗನಬಾವು ಕಾಣಿಸಿಕೊಂಡಿದೆ. ಇದು ಮಮ್ಸ್ ವೈರಾಣುವಿನಿಂದ ಹರಡುತ್ತದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಇದುವರೆಗೂ ಅಂಗನವಾಡಿ 1, ಪ್ರಾಥಮಿಕ 12, ಪ್ರೌಢ ಶಾಲೆ 4 ಮಕ್ಕಳಿಗೆ ಮಂಗನಬಾವು ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಿದ್ದು ಪ್ರತಿ ದಿನ ಆಯಾ ಪ್ರದೇಶದ ಆರೋಗ್ಯ ಕೇಂದ್ರ ವೈದ್ಯರು ತಾಲೂಕ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳು ತೀವ್ರ ಪರೀಕ್ಷೆ ಆರಂಭಿಸಿದ್ದಾರೆ.

“ಮಂಗನಬಾವು ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳ ಪ್ರಾಣಕ್ಕೆ ಅಪಾಯವಿಲ್ಲ. 50 ಮಕ್ಕಳ ಪೈಕಿ 6 ರಿಂದ 7 ಮಕ್ಕಳಲ್ಲಿ ಈ ಮಂಗನಬಾವು ಇದೆ. ಮಂಗನ ಬಾವು ಮಮ್ಸ್ ವೈರಸ್ನಿಂದ ಹರಡುತ್ತದೆ. ಇದು 10-12 ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಗುಣಮುಖವಾಗುತ್ತದೆ. ಬಾವಿನ ತೀವ್ರತೆ ಅಷ್ಟೊಂದು ಇರುವುದಿಲ್ಲ. ಹಾಗಾಗಿ ಮಕ್ಕಳ ಪಾಲಕರು ಗಾಬರಿಪಡಬಾರದು’. ಚಿಕಿತ್ಸೆ ನೀಡದೇ ಇದ್ದರೂ ಮಂಗನ ಬಾವು ತನ್ನಷ್ಟಕ್ಕೆ ತಾನೆ ಕಡಿಮೆ ಆಗುತ್ತದೆ, ಈ ವೈರಸ್‌ಗೆ ಪ್ರತ್ಯೇಕ ಚಿಕಿತ್ಸೆ ಇರುವುದಿಲ್ಲ.

ಡಾ.ಅಮರೇಗೌಡ ಪಾಟೀಲ್, ಮಕ್ಕಳ ತಜ್ಞ ವೈದ್ಯರು ಲಿಂಗಸುಗೂರು