ಲೋಕಸಭಾ ಚುನಾವಣೆ: ಮೇ 7ಕ್ಕೆ ಜಿಲ್ಲೆಯಲ್ಲಿ ಮತದಾನ

| Published : Mar 17 2024, 01:45 AM IST

ಸಾರಾಂಶ

ಏ.19ಕ್ಕೆ ನಾಮ ಪತ್ರ ಸಲ್ಲಿಕೆ । ಏ.20ಕ್ಕೆ ನಾಮಪತ್ರ ಪರಿಶೀಲನೆ, ನಾಮಪತ್ರಗಳನ್ನು ವಾಪಸ್ಸು ಪಡೆಯಬಹುದಾಗಿದೆ. ಉಳಿದಂತೆ ಮೇ 7ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಜೂ.4ರಂದು ದೇಶದಾದ್ಯಂತ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣೆ ಆಯೋಗದಿಂದ ಚುನಾವಣೆ ವೇಳಾಪಟ್ಟಿ ಘೋಷಿಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಲೋಕಸಭಾ ಕ್ಷೇತ್ರ-6ರ ಚುನಾವಣೆಗೆ ಸಂಬಂಧಿಸಿದಂತೆ ಮೇ 7ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.4ರಂದು ನಾಮಪತ್ರ ಅಧಿಸೂಚನೆ ಹೊರಡಿಸಲಾಗುವುದು, ಏ.19ರಂದು ನಾಮ ಪತ್ರಗಳನ್ನು ಸಲ್ಲಿಸಲು ಕೊನೆ ದಿನಾಂಕವಾಗಿರುತ್ತದೆ. ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.22ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯಬಹುದಾಗಿದೆ. ಉಳಿದಂತೆ ಮೇ 7ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಜೂ.4ರಂದು ದೇಶದಾದ್ಯಂತ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ ಎಂದು ತಿಳಿಸಿದರು.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಧಪಟ್ಟಂತೆ ಪಕ್ಕದ ಯಾದಗಿರಿಯ ಮೂರು ಮತ್ತು ರಾಯಚೂರಿನ ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ 8 ಕ್ಷೇತ್ರಗಳಿದ್ದು, ಶೋರಪುರ, ಶಾಹಪುರ, ಯಾದಗಿರಿ, ರಾಯಚೂರು ಗ್ರಾಮೀಣ, ರಾಯಚೂರು ನಗರ ಕ್ಷೇತ್ರ, ಮಾನವಿ, ದೇವದುರ್ಗ ಮತ್ತು ಲಿಂಗಸುಗೂರು ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಈ ಎರಡು ಕ್ಷೇತ್ರಗಳಲ್ಲಿ ಒಟ್ಟು 2203 ಮತಗಟ್ಟೆಗಳಿವೆ ಎಂದರು.

ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 19,93,755 ಮತದಾರರು:

ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 19,93,755 ಮತದಾರರಿದ್ದು, 9,85,675 ಪುರುಷ ಮತದಾರರು, 10,05,246 ಮಹಿಳಾ ಮತದಾರರಿದ್ದು, 297 ಲಿಂಗತ್ವ ಅಲ್ಪಸಂಖ್ಯಾತರು ಹಾಗೂ 334 ಸೇವಾ ಮತದಾರರಿದ್ದಾರೆ. ಇದರಲ್ಲಿ 42,394 ಯುವ ಮತದಾರರಿದ್ದು, 22,857 ವಿಕಲಚೇತನ ಮತದಾರರಿದ್ದಾರೆ ಎಂದು ವಿವರಿಸಿದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಯ ಉಲ್ಲಂಘನೆಗಾಗಿ ಮತ್ತು ವಿವಿಧ ವಿಷಯಗಳಿಗಾಗಿ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 1950ಗೆ ಕರೆ ಮಾಡುವ ಮೂಲಕ, ಸಿವಿಜಿಲ್ ಆ್ಯಪ್ ಅಥವಾ ಇತರೆ ಮಾಧ್ಯಮದ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.

ನೀತಿ ಸಂಹಿತೆ ಜಾರಿ: ಲೋಕಸಭಾ ಚುನಾವಣೆಗೆ 4006 ಬಿಯು, 2736 ಸಿಯು ಹಾಗೂ 2869 ವಿವಿಪ್ಯಾಟ್‌ಗಳು ಸ್ವೀಕೃತಿಯಾಗಿದ್ದು, ಈ ಎಲ್ಲಾ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯವು ಪೂರ್ಣಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ 5 ಅಂತಾರಾಜ್ಯ , 9 ಅಂತರ ಜಿಲ್ಲೆ ಹಾಗೂ 9 ಚೆಕ್‌ಪೋಸ್ಟ್‌ಗಳನ್ನು ಜಿಲ್ಲೆಯ ಒಳಗೆ ಸ್ಥಾಪಿಸಲಾಗಿದೆ. ಇದರ ನಿರ್ವಹಣೆಯನ್ನು 24/7 ಸಿಎಪಿಎಫ್ ಹಾಗೂ ಜಾರಿ ಸಂಸ್ಥೆಗಳು ನಿಗವಹಿಸಲಾಗುವುದು ಎಂದರು.

ಚೆಕ್ ಪೋಸ್ಟ್‌ಗಳಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಯಾವುದೇ ವ್ಯಕ್ತಿಯೂ 50 ಸಾವಿರಕ್ಕಿಂತ ಎಚ್ಚಿನ ಹಣವನ್ನು ದಾಖಲೆ ರಹಿತವಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.