ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ

| Published : May 07 2024, 01:06 AM IST / Updated: May 07 2024, 01:07 AM IST

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ । 2203 ಮತಗಟ್ಟೆ ಸ್ಥಾಪನೆ, 8,464 ಸಿಬ್ಬಂದಿ ನಿಯೋಜನೆಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಸೂತ್ರವಾಗಿ ಜರುಗಿದ ಮಸ್ಟರಿಂಗ್ ಕಾರ್ಯ । ಒಟ್ಟು 20,10,437 ಮತದಾರರ ನೋಂದಣಿಯಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಪಕ್ಕದ ಯಾದಗಿರಿ ಜಿಲ್ಲೆಯನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್‌ ಕಾರ್ಯವು ಸುಸೂತ್ರವಾಗಿ ನಡೆಯಿತು.

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಶಾಂತಿ, ಸುವ್ಯವಸ್ಥಿತದ ಜೊತೆಗೆ ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಳಿಸಿದ್ದು, ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಅದಕ್ಕೆ ಅಗತ್ಯವಾದ ತಯಾರಿಯನ್ನು ರೂಪಿಸಿರುವ ಜಿಲ್ಲಾಡಳಿತ ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸಿ ಅನುಷ್ಠಾನಗೊಳಿಸಿದೆ.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮತದಾನ ಹಿನ್ನೆಲೆ ಒಟ್ಟು 2203 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 8,464 ಜನ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಕಣದಲ್ಲಿರುವ ಎಂಟು ಜನರ ಭವಿಷ್ಯದ ಮೇಲೆ ಮುದ್ರೆ ಹಾಕಲು ಒಟ್ಟು 20, 10,437 ಮತದಾರರು ನೋಂದಾಯಿಸಿಕೊಂಡಿದ್ದಾರೆ.

ನಗರ, ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಜಿಲ್ಲಾ ಕೇಂದ್ರ ಸೇರಿ ಜಿಲ್ಲೆಯ ಮಾನ್ವಿ, ದೇವದುರ್ಗ ಹಾಗೂ ಲಿಂಗಸುಗೂರು, ಶೋರಾಪುರ, ಸಹಪುರ ಹಾಗೂ ಯಾದಗಿರಿಯ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಜರುಗಿದ ಮಸ್ಟರಿಂಗ್‌ ಕಾರ್ಯದಲ್ಲಿ ಚುನಾವಣೆಗೆ ನಿಯುಕ್ತಗೊಂಡ ಅಧಿಕಾರಿ, ಸಿಬ್ಬಂದಿ, ಪೊಲೀಸ್‌ ಹಾಗೂ ಭದ್ರತಾ ಸಿಬ್ಬಂದಿ ಮತಯಂತ್ರ, ಮತದಾನಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಪಡೆದು ತಮಗೆ ಸೂಚಿಸಿದ ಮತಗಟ್ಟೆಗಳತ್ತ ಹೆಜ್ಜೆಹಾಕಿದರು.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆ ಐದು ವಿದಾನಸಭಾ ಕ್ಷೇತ್ರಗಳ ಜೊತೆಗೆ ಪಕ್ಕದ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿಂಧನೂರು ಮತ್ತು ಮಸ್ಕಿಯಲ್ಲಿಯೂ ಸಹ ಅಲ್ಲಿನ ಆಡಳಿತವು ಮಸ್ಟರಿಂಗ್‌ ಕಾರ್ಯ ನಡೆಸಿ ನಿಯುಕ್ತಿಗೊಂಡ ಅಧಿಕಾರಿ, ಸಿಬ್ಬಂದಿಗೆ ಮತದಾನ ಯಂತ್ರದ ಜತೆ ಚುನಾವಣಾ ಸಾಮಗ್ರಿಗಳನ್ನು ನೀಡಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ಸ್ಥಳೀಯ ಎಸ್‌ಆರ್‌ಪಿಎಸ್‌ ಹಾಗೂ ಎಲ್‌ವಿಡಿ ಕಾಲೇಜಿನಲ್ಲಿ ರಾಯಚೂರು ನಗರ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್‌ ಕಾರ್ಯ ನಡೆಯಿತು. ಸೋಮವಾರ ಬೆಳಗ್ಗೆಯಿಂದ ಆರಂಭಗೊಂಡ ಮಸ್ಟರಿಂಗ್‌ ಕಾರ್ಯ ಸಂಜೆವರೆಗೂ ನಡೆಯಿತು.

ಮಸ್ಟರಿಂಗ್‌ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟದ ಜೊತೆಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸಹ ಮಾಡಲಾಗಿತ್ತು.ಮತದಾರರ ಮಾಹಿತಿ: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 9,94,646 ಪುರುಷರು,10,15158 ಮಹಿಳೆಯರು, 299 ಇತರೆ ಹಾಗೂ 334 ಸೇವಾ ಮತದಾರರು ಸೇರಿ ಒಟ್ಟಾರೆ 20,10,437 ಜನ ಮತದಾನಕ್ಕೆ ನೊಂದಾಯಿಸಿಕೊಂಡಿದ್ದು, ಇದರಲ್ಲಿ 27,201 ಯುವಕರು, 20,624 ಯುವತಿಯರು ಹಾಗೂ 10 ಇತರೆ ಸೇರಿ ಒಟ್ಟು 47,835 ಜನರು 18-19 ವಯಸ್ಸಿನ ಮತದಾರರಿದ್ದಾರೆ.

ಮತಗಟ್ಟೆಗಳ ವಿವರ: ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 2,203 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶೋರಾಪುರ ವಿಧಾನಸಭಾ ಕ್ಷೇತ್ರದಲ್ಲಿ 317 ಮತಗಟ್ಟೆಗಳನ್ನು, ಶಹಾಪುರ 265, ಯಾದಗಿರಿ 268, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ 275 ಹಾಗೂ ರಾಯಚೂರು ನಗರ 250 ಮತಗಟ್ಟೆ, ಮಾನ್ವಿ 275, ದೇವದುರ್ಗ 267, ಲಿಂಗಸುಗೂರು 285, ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಇದರಲ್ಲಿ 479 ಸೂಕ್ಷ್ಮ ಹಾಗೂ 42 ಪ್ರಮುಖ ಮತಗಟ್ಟೆಗಳೆಂದು ಗುರುತಿಸಲಾಗಿದೆ.ಮಸ್ಟರಿಂಗ್ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರ ಭೇಟಿ: ಲೋಕಸಭಾ ಚುಣಾವಣೆ-2024ಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತದಾನ ಪ್ರಕ್ರಿಯೆ ಜರುಗಲಿದ್ದು, ಅದರ ಹಿಂದಿನ ದಿನ ಸೋಮವಾರ ನಗರದ ಎಸ್.ಆರ್.ಪಿ.ಎಸ್ ಪಿಯು ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ್ ಪ್ರಕಾಶ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ತಹಸೀಲ್ದಾರ್‌ ಸುರೇಶ ವರ್ಮಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಎನ್ ಬಸರಿಗಿಡದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.