ಸಾರಾಂಶ
ರಾಯಚೂರಿನ ನಗರಸಭೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನರಸಮ್ಮ ಮಾಡಗಿರಿ, ಉಪಾಧ್ಯಕ್ಷರಾಗಿ ಸಾಜೀದ್ ಸಮೀರ್ ಅವಿರೋಧವಾಗಿ ಆಯ್ಕೆ
ಕನ್ನಡಪ್ರಭ ವಾರ್ತೆ ರಾಯಚೂರು
ಇಲ್ಲಿನ ನಗರಸಭೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನರಸಮ್ಮ ಮಾಡಗಿರಿ, ಉಪಾಧ್ಯಕ್ಷರಾಗಿ ಸಾಜೀದ್ ಸಮೀರ್ ಬುಧವಾರ ಅವಿರೋಧವಾಗಿ ಆಯ್ಕೆಗೊಂಡಿದ್ದು, ಈ ಮುಖಾಂತರ ನಗರಸಭೆ ಅಧಿಕಾರವನ್ನು ಕಾಂಗ್ರೆಸ್ ಪಕ್ಷವು ಮತ್ತೆ ತನ್ನ ಕೈವಶಕ್ಕೆ ಪಡೆದುಕೊಂಡಿದೆ.ನಗರಸಭೆ ಕಚೇರಿ ಸಭಾಂಗಣದಲ್ಲಿ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ವಾರ್ಡ್ ನಂ.21ರ ಸದಸ್ಯೆ ನರಸಮ್ಮ ಮಾಡಗಿರಿ ಅದೇ ರೀತಿ ಹಿಂದುಳಿದ (ಅ)ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.16 ಪಕ್ಷೇತರ ಅಭ್ಯರ್ಥಿ ಸಾಜೀದ್ ಸಮೀರ್ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ, ಇವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹಾಗೂ ರಾಯಚೂರು ಸಹಾಯಕ ಆಯುಕ್ತರಾದ ಮೈಬೂಬಿ ಘೋಷಿಸಿದರು.
ಒಟ್ಟು 35 ಸದಸ್ಯರನ್ನು ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 12, ಜೆಡಿಎಸ್‌ನ 3 ಮತ್ತು ಕಾಂಗ್ರೆಸ್ ಬೆಂಬಲಿತ 9 ಜನ ಪಕ್ಷೇತರ ಸದಸ್ಯರಿದ್ದು, ಮೂರು ಜೆಡಿಎಸ್, ಹನ್ನೆರಡು ಬಿಜೆಪಿ ಸದಸ್ಯರು, ನಗರ ಶಾಸಕರ ಒಂದು ಮತ ಇದ್ದರೂ ಬಿಜೆಪಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸದೇ ದೂರೆ ಉಳಿದಿತ್ತು, ಕಾಂಗ್ರೆಸ್ 11 ಸದಸ್ಯರು, ಒಂಬತ್ತು ಪಕ್ಷೇತರರು, ಸಂಸದ, ಸಚಿವ ಹಾಗೂ ಎಂಎಲ್ಸಿ ಮತಗಳಿಂದ ಕಾಂಗ್ರೆಸ್ ಗೆಲುವು ಅನಾಯಾಸವಾಯ್ತು. ಇತ್ತ ಪಕ್ಷದ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ, ನಗರದಲ್ಲಿ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿದರು.ಗೆಲುವಿನ ನಂತರ ಮಾತನಾಡಿದ ಹೊಸ ಅಧ್ಯಕ್ಷ-ಉಪಾಧ್ಯಕ್ಷರು, ನಗರಕ್ಕೆ ಅಗತ್ಯ ಮೂಲಭೂತ ಸವಲತ್ತು ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು, ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಇತರೆ ಸವಲತ್ತುಗಳನ್ನು ಎಲ್ಲರ ಸಹಕಾರದೊಂದಿಗೆ ಕಲ್ಪಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಎಂಎಲ್ಸಿ ಎ.ವಸಂತ ಕುಮಾರ, ಹಿರಿಯ ಸದಸ್ಯರಾದ ಜಯಣ್ಣ, ಶ್ರೀನಿವಾಸರೆಡ್ಡಿ, ಜಿಂದಪ್ಪ ಸೇರಿದಂತೆ ಸದಸ್ಯರು, ಅಧಿಕಾರಿ, ಸಿಬ್ಬಂದಿ, ಮುಖಂಡರು, ಕಾರ್ಯಕರ್ತರು ಇದ್ದರು.