ರಾಯಚೂರು: ಗಬ್ಬೂರಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಿ

| Published : Jun 27 2024, 01:01 AM IST

ಸಾರಾಂಶ

ದೇವದುರ್ಗ ಗಬ್ಬೂರ ಗ್ರಾಮಕ್ಕೆ ಆಗಮಿಸಿದ್ದ ಶಾಸಕಿ ಕರೆಮ್ಮ ಜಿ.ನಾಯಕರಿಗೆ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ದೇವದುರ್ಗ: ತಾಲೂಕಿನಲ್ಲಿ ಹಿರಿಯ ಪಟ್ಟಣವಾಗಿರುವ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹೋಬಳಿ ಕೇಂದ್ರವಾಗಿರುವ ಗಬ್ಬೂರು ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು, ವಸತಿ ನಿಲಯ ಮಂಜೂರು ಮಾಡಬೇಕೆಂದು ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಗಬ್ಬೂರ ಗ್ರಾಮಕ್ಕೆ ಆಗಮಿಸಿದ್ದ ಶಾಸಕಿ ಕರೆಮ್ಮ ಜಿ.ನಾಯಕರಿಗೆ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿ, ಕಟ್ಟಡಗಳಿಗೆ ಸರ್ಕಾರಿ ಜಮೀನು ಲಭ್ಯವಿದ್ದು ಸ.ನಂ. 896ರಲ್ಲಿ 4ಎಕರೆ ಜಮೀನು ಮೀಸಲಿಡಬೇಕು. ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಗಳು ಹಳೇ ಕಟ್ಟಡಗಳಾಗಿದ್ದು ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿವೆ ಕೂಡಲೇ ಹೊಸ ಕಟ್ಟಡಗಳ ನಿರ್ಮಾಣಮಾಡಬೇಕು. 40 ಗ್ರಾಮಗಳ ವ್ಯಾಪ್ತಿ ಹಾಗೂ ವಿಶಾಲ ಪ್ರದೇಶವುಳ್ಳ ಗಬ್ಬೂರ ಗ್ರಾಮದಲ್ಲಿ ಹೆಚ್ಚುವರಿ ಶೈಕ್ಷಣಿಕ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತಗೊಂಡಿದ್ದಾರೆ. ಹಾಗೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜನಸಂಖ್ಯೆಗೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರುಗೊಳಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವೇಳೆ ಸಂಘಟನೆ ಪದಾಧಿಕಾರಿಗಳಾದ ಶಾಂತಕುಮಾಡ ಹೊನ್ನಟಗಿ, ಮಲ್ಲಪ್ಪ ಗೌಡ ಗಬ್ಬೂರ, ಬಂದಯ್ಯ ತಾತಾ ಗಬ್ಬೂರ, ಶಿವುಕುಮಾರ ಹೊಂಬೆಳಕು, ರಾಜಪ್ಪ ಸಿರವರ್ಕರ್, ಮರೆಪ್ಪ ಮಲದಕಲ್, ಮಾರ್ಖಂಡ ಗಬ್ಬೂರ ಹಾಗೂ ಇತರರು ಇದ್ದರು.