ಸಾರಾಂಶ
ದಾಖಲೆ ನೀಡುವಂತೆ ನಕಲಿ ವೈದ್ಯನಿಗೆ ನೋಟಿಸ್: ಟಿಎಚ್ಓ ಡಾ. ಮಹಮ್ಮದ ಗಫಾರ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಗಡಿಪ್ರದೇಶ ಮಿರಿಯಾಣ, ಕಲ್ಲೂರ, ಪೋಲಕಪಳ್ಳಿ ಗ್ರಾಮಗಳಲ್ಲಿ ನಕಲಿ ವೈದ್ಯರು ನಡೆಸುತ್ತಿರುವ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ಓರ್ವ ನಕಲಿ ವೈದ್ಯನಿಗೆ ನೋಟಿಸ್ ನೀಡಿ ಮಾತ್ರೆ ಮತ್ತು ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಮ್ಮದ ಗಫಾರ ತಿಳಿಸಿದ್ದಾರೆ.ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಸರ್ಕಾರದಿಂದ ಯಾವುದೇ ಅನುಮತಿ ಪಡೆದುಕೊಳ್ಳದೆ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ವೆಂಕಟರಾಮಯ್ಯ ವೀರಾಸ್ವಾಮಿ ಕ್ಲಿನಿಕ್ ಮೇಲೆ ದಾಳಿ ಮಾಡಿ, ಆತನ ಬಳಿ ಇರುವ ಮಾತ್ರೆ, ಔಷಧಿ ಬಾಟಲ್ ಹಾಗೂ ಬಿ.ಪಿ. ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇತನು ಯಾವುದೇ ವೈದ್ಯಕೀಯ ಪರೀಕ್ಷೆ ಪಾಸಾಗಿಲ್ಲ ಕೇವಲ ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾಗಿದ್ದಾನೆ. ೬೫ ವರ್ಷದ ವೆಂಕಟರಾಮಯ್ಯ ಇತನು ತೆಲಂಗಾಣ ರಾಜ್ಯದ ತಾಂಡೂರ ನಗರದಿಂದ ಮಾತ್ರೆ ಗ್ಲೂಕೋಸ್ ಹಾಗೂ ಔಷಧಿ ತಂದು ರೋಗಿಗಳ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಆತನಿಗೆ ವಿಚಾರಿಸಿದಾಗ ನನ್ನ ಬಳಿ ವೈದ್ಯಕೀಯ ದಾಖಲೆಗಳಿವೆ ಎಂದು ತಿಳಿಸಿದ್ದಾರೆ. ಅವುಗಳನ್ನು ಟಿಎಚ್‌ಓ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿ ನೋಟಿಸ್ ಜಾರಿ ಮಾಡಲಾಗಿದೆ. ಕ್ಲಿನಿಕ್ ಬಾಗಿಲು ಮುಚ್ಚಿ ಸೀಜ್ ಮಾಡಲಾಗಿದೆ ಎಂದು ಹೇಳಿದರು.ಮಿರಿಯಾಣ ಗ್ರಾಮದಲ್ಲಿ ವೈದ್ಯರು, ತಹಸೀಲ್ದಾರರು ಕ್ಲಿನಿಕ್ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಸುದ್ದಿ ತಿಳಿದ ಕೆಲವು ನಕಲಿ ವೈದ್ಯರು ತಮ್ಮ ಕ್ಲಿನಿಕ್ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ ಆದರೆ ದಾಳಿ ನಿರಂತರವಾಗಿ ನಡೆಯಲಿದೆ.
ದಾಳಿಯ ವೇಳೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಂದಾಯ ನಿರೀಕ್ಷಕ ರವಿಕುಮಾರ ಪಾಟೀಲ, ಚಿಕ್ಕನಿಂಗದಳ್ಳಿ, ಗ್ರಾಮ ಲೆಕ್ಕಿಗರು, ಮಿರಿಯಾಣ ಪೊಲೀಸರು ಇದ್ದರು.