ಅಕ್ರಮ ಮದ್ಯ ಮಾರಾಟಗಾರರ ಮನೆ ಮೇಲೆ ದಾಳಿ

| Published : Apr 19 2025, 12:42 AM IST

ಸಾರಾಂಶ

ಗ್ರಾಮಕ್ಕೆ ಬಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ

ಧಾರವಾಡ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಚೆಗೆ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ಬಹಿರಂಗ ಸತ್ಯ. ಗ್ರಾಮಗಳ ಓಣಿ ಓಣಿಗಳಲ್ಲಿ ಹಾಗೂ ಕಿರಾಣಿ ಅಂಗಡಿಯಲ್ಲಿ ಮದ್ಯ ಲಭಿಸುತ್ತಿದ್ದು, ಈಚೆಗೆ ತಾಲೂಕಿನ ಹೊಲ್ತಿಕೋಟಿಯಲ್ಲಿ ಮಹಿಳೆಯರೇ ಕಿರಾಣಿ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಹೊಲ್ತಿಕೋಟಿ ಸಮೀಪದ ಗ್ರಾಮ ಹಳ್ಳಿಗೇರಿ ಮಹಿಳೆಯರು ತಿಪ್ಪೆಯಲ್ಲಿ ಅಕ್ರಮ ಮದ್ಯ ಇಟ್ಟು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಶುಕ್ರವಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಿಡಿದು ಕೊಟ್ಟಿರುವ ಘಟನೆ ನಡೆದಿದೆ.

ಮಾರಾಟಗಾರರ ಮೇಲೆ ದಾಳಿ ಮಾಡಲು ಸ್ವತಃ ನಾನೇ ಹೋಗಬೇಕಿದೆ ಎಂದು ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಬಕಾರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳೆಯರೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಮನೆಯಲ್ಲಿ ತಿಪ್ಪಿಗುಂಡಿಯಲ್ಲಿ ಮುಚ್ಚಿಟ್ಟು ಮದ್ಯ ಮಾರಾಟ ಮಾಡುತ್ತಿರುವ ಸಂಗೀತಾ ಸಾಲಗಟ್ಟಿ ಎಂಬುವರನ್ನು ಹಳ್ಳಿಗೇರಿ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ದಾಳಿ ನಡೆಸಿ ಅಬಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಬಂದ ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಕಳಪೆ ಗುಣಮಟ್ಟದ ಮದ್ಯ ಸೇವಿಸಿ ಗ್ರಾಮದ ಕೆಲವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಬೇಸತ್ತು ನಾವೆಲ್ಲರೂ ಮದ್ಯ ಮಾರಾಟ ಮಾಡುತ್ತಿರುವರ ವಿರುದ್ಧ ಸಿಡಿದೆದ್ದೇವೆ. ಇನ್ಮುಂದೆ ಅಕ್ರಮ ಮದ್ಯ ಮಾರಾಟ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥ ಅಶೋಕ ಮಾನೆ ಪ್ರತಿಕ್ರಿಯೆ ನೀಡಿದರು.