ಮಂಡ್ಯದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ: ೨೦ ಕೆಜಿ ಪ್ಲಾಸ್ಟಿಕ್ ವಶ

| Published : Aug 20 2025, 01:30 AM IST

ಸಾರಾಂಶ

ಮಂಡ್ಯದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದ್ದು ಪ್ಲಾಸ್ಟಿಕ್ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂದಿನ ದಾಳಿ ವೇಳೆ ಸಾವಿರಾರು ರು. ಬೆಲೆ ಬಾಳುವ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ದಂಡವನ್ನು ಸಹ ವಸೂಲಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ ಹಾಗೂ ಪರಿಸರ ಅಭಿಯಂತರ ರುದ್ರೇಗೌಡ ನೇತೃತ್ವದ ಅಧಿಕಾರಿಗಳ ತಂಡ ೨೦ ಕೆಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ೧೧ ಸಾವಿರ ರು.ಗೂ ಹೆಚ್ಚಿನ ದಂಡ ವಿಧಿಸಿದೆ. ನಗರದ ಹೊಸಹಳ್ಳಿ ಸರ್ಕಲ್, ಅಶೋಕನಗರ, ವಿ.ವಿ.ರಸ್ತೆಯ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ ಕವರ್‌ಗಳು, ಥರ್ಮಾಕೋಲ್ ಬೌಲ್‌ಗಳು, ಪ್ಲಾಸ್ಟಿಕ್ ಸ್ಪೂನ್‌ಗಳು ಸೇರಿದಂತೆ ಇತರೆ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಐದು ಅಂಗಡಿಗಳಿಂದ ಸುಮಾರು ೨೦ ಕೆಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ೧೧ ಸಾವಿರ ರು.ಗಳಿಗೂ ಅಧಿಕ ದಂಡ ವಿಧಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ ಮಾತನಾಡಿ, ಮಂಡ್ಯದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದ್ದು ಪ್ಲಾಸ್ಟಿಕ್ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂದಿನ ದಾಳಿ ವೇಳೆ ಸಾವಿರಾರು ರು. ಬೆಲೆ ಬಾಳುವ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ದಂಡವನ್ನು ಸಹ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ದಂಡದ ಪ್ರಮಾಣವನ್ನು ಹೆಚ್ಚಿಸಲಾಗುವುದು. ಎಂದು ಎಚ್ಚರಿಕೆ ನೀಡಿದರಲ್ಲದೆ, ಇಂದಿನಿಂದ ಅಂಗಡಿಗಳ ಮೇಲಿನ ದಾಳಿ ಆರಂಭಗೊಂಡಿದ್ದು, ಈ ದಿವಸದಿಂದ ಆರಂಭಗೊಂಡಿದ್ದು ಕೇವಲ ಒಂದೇ ಒಂದು ಅಂಗಡಿಯಲ್ಲಿ ಏಳು ಚೀಲಗಳಷ್ಟು ಸಂಗ್ರಹಿಸಲಾಗಿದೆ ಎಂದರು.

ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದರಿಂದ ನಗರದ ಬಡಾವಣೆಗಳ ಸ್ವಚ್ಛತೆ ಹಾಳಾಗುತ್ತಿದೆ. ಕಸದ ರಾಶಿಯಲ್ಲಿ ಸಿಗುವಂತಹ ಪ್ಲಾಸ್ಟಿಕ್ ವಸ್ತುವನ್ನು ಹಸು, ಕರು ಹಾಗೂ ಇನ್ನಿತರ ಪ್ರಾಣಿಗಳು ಸೇವಿಸಿ ತೊಂದರೆಯನ್ನು ಅನುಭವಿಸುತ್ತಿವೆ. ಸಾರ್ವಜನಿಕರು ಪ್ಲಾಸ್ಟಿಕ್ ಕವರ್‌ಗಳು ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕೈಬಿಟ್ಟು ಬಟ್ಟೆ ಬ್ಯಾಗ್‌ಗಳು, ಕಾಗದದ ಲೋಟ, ಅಡಕೆ ತಟ್ಟೆಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಮನವಿ ಮಾಡಿದರು.

ಆರೋಗ್ಯ ನಿರೀಕ್ಷಕ ಚಲುವರಾಜು ಸೇರಿದಂತೆ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.