ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಹೋರಾಟದ ಮೂಲಕವೇ ರೈಲು ಮಾರ್ಗ ಪಡೆದುಕೊಳ್ಳುವುದು ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ರಾಮದುರ್ಗ ತಾಲೂಕಿನ ರೈಲು ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.ಲೋಕಾಪೂರದಿಂದ ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದಲ್ಲಿ ರಾಮದುರ್ಗ ತಾಲೂಕನ್ನು ಬೇರ್ಪಡಿಸಿ ಅನ್ಯಾಯ ಮಾಡುವ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಜರುಗಿದ ಸಭೆಯಲ್ಲಿ ರೈಲು ಹೋರಾಟ ಸಮಿತಿಯು ತೀವ್ರ ಆಕ್ರೋಶ ಹೊರಹಾಕಿತು.ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿಗೆ ಈಗಾಗಲೇ ರೈಲು ಮಾರ್ಗದ ಸಮೀಕ್ಷೆ ಕಾರ್ಯ ೨೦೧೯ರಲ್ಲಿಯೇ ಪೂರ್ಣಗೊಂಡು ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದ ಅಂದಾಜು ಪತ್ರಿಕೆ ಸಹ ಸಿದ್ಧವಾಗಿದೆ. ರಾಮದುರ್ಗ ತಾಲೂಕು ಸಹ ಒಂದು ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶಬರಿ ಕೊಳ್ಳ, ಶಿವನ ಮೂರ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ರಾಮದುರ್ಗದಲ್ಲಿವೆ. ಇದನ್ನು ಹೊರತುಪಡಿಸಿ ಎರಡು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಜನರಿಗೆ ರೈಲು ಮಾರ್ಗದ ಅವಶ್ಯಕತೆಯೂ ಹೆಚ್ಚಿದೆ. ಹೀಗಿರುವಾಗ ಕೆಲವರ ಕುಚೇಷ್ಟೆಯಿಂದಾಗಿ ರಾಮದುರ್ಗವು ರೈಲು ಅವಕಾಶದಿಂದ ವಂಚಿತಗೊಳ್ಳುತ್ತಿದೆ ಎಂಬ ಸಭೆಯಲ್ಲಿ ಕೆಲವರು ಅನುಮಾನ ವ್ಯಕ್ತಪಡಿಸಿದರು.ಈ ಹಿಂದೆ ೨೦೧೯ರಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರವೇ ಲೋಕಾಪೂರ ರಾಮದುರ್ಗ ಮಾರ್ಗವಾಗಿ ಸವದತ್ತಿ ಮತ್ತು ಧಾರವಾಡಕ್ಕೆ ರೈಲು ಮಾರ್ಗ ನಿರ್ಮಿಸಬೇಕು ಎಂದು ಪಕ್ಷಾತೀತವಾಗಿ ಹೋರಾಟ ಆರಂಭಿಸಬೇಕು ಎಂದು ಬಹುತೇಕರು ಅಭಿಪ್ರಾಯಪಟ್ಟರು. ರಾಮದುರ್ಗ ತಾಲೂಕಿನ ಅಭಿವೃದ್ಧಿಗಾಗಿ ಹೋರಾಟದ ಮೂಲಕ ರೈಲು ಮಾರ್ಗಕ್ಕಾಗಿ ಒತ್ತಾಯಿಸಲು ಅ.೨೨ ರಂದು ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಹೋರಾಟದ ಹಾದಿ ಹಿಡಿಯಬೇಕಿದೆ ಎಂದು ನಿರ್ಧರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಗೈಬು ಜೈನೆಖಾನ, ಪ್ರದೀಪ ಪಟ್ಟಣ, ಮಹ್ಮದ್‌ಶಫಿ ಬೆಣ್ಣಿ, ಎಂ.ಕೆ.ಯಾದವಾಡ, ದಾದಾಫೀರ ಕೆರೂರ, ಡಿ.ಎಫ್.ಹಾಜಿ, ಮಹ್ಮದ್‌ಬೇಗ ನಿಗದಿ, ರೈತ ಮುಖಂಡ ಮಲ್ಲಿಕಾರ್ಜುನ ರಾಮದುರ್ಗ, ಜಿ.ಬಿ. ರಂಗನಗೌಡರ, ಸಂಜು ಕಪಾಲಿ ಸೇರಿದಂತೆ ಅನೇಕರು ಇದ್ದರು.