ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ - ಮಣಿಪಾಲ ಹೆದ್ದಾರಿಯ ಮಧ್ಯೆ ಇರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗಾಗುತ್ತಿರುವ ಮಾರಣಾಂತಿಕ ಸಮಸ್ಯೆಗಳನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಶುಕ್ರವಾರ ‘ಜೀವಂತ ಶವ ಯಾತ್ರೆ’ಯ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಇಲ್ಲಿನ ಇಂದ್ರಾಳಿ ಶಾಲೆಯ ಮುಂದೆ ಜೀವಂತ ಶವವಾಗಿ ಚಟ್ಟದ ಮೇಲೆ ಮಲಗಿ, ಡೋಲು ಭಾರಿಸಿ, ನಾಗರಿಕ ಸಮಿತಿಯ ಕಾರ್ಯಕರ್ತರು ಶವ ಯಾತ್ರೆ ನಡೆಸಿದರು. ನೂತನ ರೈಲ್ವೆ ಸೇತುವೆ ಕೆಳಭಾಗದಲ್ಲಿರಿಸಿ ಧಿಕ್ಕಾರ ಕೂಗುವ ಮೂಲಕ ಕೇಂದ್ರ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಸಡ್ಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ನಂತರ ಅಣಕು ಶವಯಾತ್ರೆಯನ್ನು ಇಂದ್ರಾಳಿ ಹಿಂದು ರುದ್ರ ಭೂಮಿಯವರೆಗೆ ತೆಗೆದುಕೊಂಡು ಹೋಗಲಾಯಿತು. ಈ ಮೂಲಕ ವ್ಯವಸ್ಥೆಯ ವಿರುದ್ಧ ನಾಗರಿಕ ಸಮಿತಿ ಪ್ರತಿಭಟನೆ ನಡೆಸಿದೆ.ಜ.15ರಂದು ರೈಲ್ವೆ ಮೇಲ್ಸೆತುವೆ ಪೂರ್ಣಗೊಳ್ಳುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಈ ಕಾಮಗಾರಿ ಆರಂಭವಾಗಿ ಏಳು ವರ್ಷ ಕಳೆದರೂ ರೈಲ್ವೆ ಸೇತುವೆ ಪೂರ್ಣವಾಗಿಲ್ಲ ಎಂದು ಸಾರ್ವಜನಿಕರ ಪರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಿತ್ಯಾನಂದ ಒಳಕಾಡು, ಇಂದ್ರಾಳಿ ರೈಲ್ವೆ ಸೇತುವೆಯ ನಿಧಾನಗತಿಯ ಕಾಮಗಾರಿಯಿಂದ ಈ ರಸ್ತೆಯಲ್ಲಿ ಓಡಾಡುವವರು ಜೀವಂತ ಶವಾಗುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಈ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳಿಗೆ ಈ ವಿಚಾರ ತಿಳಿಯಬೇಕು ಎಂದು ಈ ಪ್ರತಿಭಟನೆ ಮಾಡಿದ್ದೇವೆ ಎಂದಿದ್ದಾರೆ.ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಆಸ್ಪತ್ರೆ ತೆರಳುವವರು ಪ್ರತಿದಿನ ಇಲ್ಲಿ ಜೀವವವನ್ನು ಕೈಯಲ್ಲಿ ಹಿಡಿದುಕೊಂಡು, ಭಯದ ವಾತಾವರಣದಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಸಮಸ್ಯೆಯ ಗಂಭೀರತೆ ತಲುಪಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ವಿನಯ ಚಂದ್ರ ಮಾತನಾಡಿ, ಮಣಿಪಾಲ ಮತ್ತು ಉಡುಪಿಯಲ್ಲಿ ಬಹಳ ಆಸ್ಪತ್ರೆಗಳಿಗೆ ಈ ದಾರಿಯಲ್ಲಿ ಬಹಳ ಆಂಬುಲೆನ್ಸ್ ಗಳು ಓಡಾಡುತ್ತಿವೆ. ಇಂದ್ರಾಳಿ ರೈಲ್ವೆ ನಿಲ್ದಾಣ ಪಕ್ಕದಲ್ಲಿಯೇ ಇದ್ದು, ಪ್ರತಿದಿನ ಸಾವಿರಾರು ಜನ ರಸ್ತೆಯಲ್ಲಿ ಓಡಾಡುತ್ತಾರೆ. ಮಕ್ಕಳಿಗೆ ಹಿರಿಯರಿಗೆ ಸಾರ್ವಜನಿಕರಿಗೆ ಬಹಳ ಸಮಸ್ಯೆ ಆಗಿದೆ. ಈ ಮಳೆಗಾಲ ಆರಂಭವಾಗುವ ಮೊದಲೇ ಸೇತುವೆ ಕಾಮಗಾರಿ ಪೂರ್ಣಗೊಂಡು ಜನರ ಓಡಾಟಕ್ಕೆ ಉಪಯೋಗ ಆಗಬೇಕು ಎಂದು ಒತ್ತಾಯಿಸಿದರು.