ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ತೆರಳುವ ದೇಶ- ವಿದೇಶಿ ಪ್ರವಾಸಿಗರಿಗೆ ರೈಲ್ವೆ ಗೇಟ್ ವಿಲನ್ ಆಗಿ ಪರಿಣಮಿಸಿದೆ. ಪ್ರವಾಸಿಗರಿಗೆ ಉಂಟಾಗುವ ಕಿರಿಕಿರಿ ತಪ್ಪಿಸಲು ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯೂ ಅರ್ಧಂಬರ್ಧ ಆಗಿದೆ. ಅಪೂರ್ಣ ಕಾಮಗಾರಿ ಯಾವಾಗ ಪೂರ್ಣವಾಗಲಿದೆ ಎಂಬ ಕೂಗು ಪ್ರವಾಸಿಗರು ಹಾಗೂ ಪ್ರಯಾಣಿಕರ ವಲಯದಿಂದ ಕೇಳಿ ಬರುತ್ತಿದೆ.
ನಗರದ ಅನಂತಶಯನಗುಡಿ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ಕಾಮಗಾರಿಗೆ ಹಿಂದಿನ ಬಿಜೆಪಿ ಸರ್ಕಾರ ಹಸಿರು ನಿಶಾನೆ ತೋರಿ; ಕಾಮಗಾರಿಯೂ ಆರಂಭಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಈ ಸೇತುವೆ ಕಾಮಗಾರಿ ಸ್ಥಗಿತಗೊಳಿಸಿದೆ. ಕಾಮಗಾರಿ ಅರ್ಧಂಬರ್ಧ ಆಗಿದ್ದು, ನಿತ್ಯ ಹಂಪಿ ಸ್ಮಾರಕಗಳ ವೀಕ್ಷಣೆಗೆ ತೆರಳುವ ಪ್ರವಾಸಿಗರು ಹಾಗೂ ಕಮಲಾಪುರ, ಕಂಪ್ಲಿ, ಗಂಗಾವತಿ ಭಾಗಕ್ಕೆ ತೆರಳುವ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.ಗೇಟ್ ಹಾಕುತ್ತಲೇ ಜಾಮ್ ಜಾಮ್:
ಈ ಮೇಲ್ಸೇತುವೆ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈಗ ರೈಲ್ವೆ ಗೇಟ್ ಅನ್ನು ಆಗಾಗ ಹಾಕಲಾಗುತ್ತಿದೆ. ರೈಲು ಬಂದರೆ ಸಾಕು, ರೈಲು ದಾಟಿ ಹೋಗುವ ವರೆಗೆ ಕಾಯಲೇ ಬೇಕು. ಜನರು ಸ್ಥಳೀಯ ಭಾಷೆಯಲ್ಲಿ ಹೆಬ್ಬಾವು ಅಡ್ಡಾಯಿತು ಎಂದು ರೈಲ್ವೆ ಗೇಟ್ ಹಾಕುತಲ್ಲೇ ಜನರು ಆಡಿಕೊಳ್ಳುತ್ತಿದ್ದಾರೆ. ಆದರೂ ನಿಂತು ಹೋಗಿರುವ ಕಾಮಗಾರಿಯನ್ನು ಆರಂಭಿಸಲಾಗುತ್ತಿಲ್ಲ. ರೈಲ್ವೆ ಗೇಟ್ ಹಾಕುತ್ತಲೇ ವಾಹನಗಳು ಸಾಲುಗಟ್ಟುತ್ತಿವೆ. ಇದರಿಂದ ಜನರು ಪರದಾಡುವಂತಾಗಿದೆ.ಈ ರೈಲ್ವೆ ಗೇಟ್‌ನಲ್ಲಿ ಲೆಕ್ಕ ಹಾಕಿದರೆ ದಿನದ 24 ಗಂಟೆಗಳಲ್ಲಿ ಕನಿಷ್ಠ 16 ತಾಸುಗಳ ಕಾಲ ರೈಲ್ವೆ ಗೇಟ್ ಹಾಕಲಾಗುತ್ತದೆ. ಇದಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಅಂತ ದಶಕಗಳ ಹೋರಾಟದ ಫಲವಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಸಹ ಆಗಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
₹32 ಕೋಟಿ ಮಂಜೂರು:ಅನಂತಶಯನಗುಡಿ ರೈಲ್ವೆ ಗೇಟ್ ಕಾಮಗಾರಿ ಪೂರ್ಣಗೊಳಿಸಲು ₹32 ಕೋಟಿ ಮಂಜೂರಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಆಗಿನ ಸಚಿವ ಆನಂದ ಸಿಂಗ್ ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಬೇಕಿತ್ತು. 9 ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ಇದುವರೆಗೆ ಅರ್ಧಕ್ಕೆ ನಿಂತಿದೆ. ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡರೆ ಹಂಪಿಗೆ ತೆರಳುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಜತೆಗೆ ಹೊಸಪೇಟೆ ಹಾಗೂ ಸುತ್ತಮುತ್ತಲ ಹೋಟೆಲ್, ರೆಸಾರ್ಟ್‌ನಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಈಗ ಪ್ರವಾಸಿಗರು ಈ ರೈಲ್ವೆ ಗೇಟ್ ಕಾಟ ತಪ್ಪಿಸಲು ಹಂಪಿ ಸುತ್ತಮುತ್ತ ಹೋಟೆಲ್, ರೆಸಾರ್ಟ್ ಹುಡುಕುತ್ತಿದ್ದಾರೆ. ಆ ಭಾಗದಲ್ಲಿ ವಸತಿಗೃಹಗಳು ಕಡಿಮೆ ಇರುವುದರಿಂದ ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ.
ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಈ ಭಾಗದ ರೈಲ್ವೆ ಹೋರಾಟಗಾರರು ಮತ್ತು ಸ್ಥಳೀಯ ಸಂಘ- ಸಂಸ್ಥೆಗಳು ಹಲವು ಬಾರಿ ಹೋರಾಟ ಮಾಡಿದ್ದರ ಫಲವಾಗಿ ಕಾಮಗಾರಿಗೆ ಆಗಿನ ಸರ್ಕಾರ ಅಸ್ತು ಎಂದಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಹಣ ಮಂಜೂರಾದರೂ ಫಲ ನೀಡಿಲ್ಲ ಎಂಬ ಮಾತು ಜನಜನಿತವಾಗಿದೆ.ಸೂಕ್ತ ನಿರ್ಧಾರ: ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಗುತ್ತಿಗೆದಾರರ ಸಮಸ್ಯೆ ಇದೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎನ್ನುತ್ತಾರೆ ಶಾಸಕ ಎಚ್.ಆರ್. ಗವಿಯಪ್ಪ.
ಪೂರ್ಣಗೊಳಿಸಿ:ಹಂಪಿ ಪ್ರವಾಸಕ್ಕೆ ದೂರದ ಊರಿನಿಂದ ಬರುತ್ತೇವೆ. ಆದರೆ, ಇಲ್ಲಿ ರೈಲ್ವೆ ಗೇಟ್ ಹಾಕುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಪ್ರವಾಸಿಗರ ಸಮಸ್ಯೆಗೆ ಸರ್ಕಾರಗಳು ಸ್ಪಂದಿಸಬೇಕು. ರೈಲ್ವೆ ಗೇಟ್ ಪದೇ ಪದೇ ಹಾಕುವುದರಿಂದ ಪ್ರಯಾಣಿಕರು, ಪ್ರವಾಸಿಗರಿಗೆ ಕಿರಿಕಿರಿಯಾಗುತ್ತದೆ. ಹಂಪಿಗೆ ತೆರಳಲು ಅನುಕೂಲ ಕಲ್ಪಿಸಬೇಕು. ಆದಷ್ಟು ಬೇಗ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿ ಎನ್ನುತ್ತಾರೆ ಪ್ರವಾಸಿಗರಾದ ನವೀನ್‌ರಾಜ್, ನಂದನ್.