ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ನಗರ ಭಾಗದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಲೈನ್‌ಗಳು ಪ್ರಸ್ತುತ ದಕ್ಷಿಣ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಬದಲಿಗೆ ಈ ರೈಲ್ವೆ ಲೈನ್‌ಗಳನ್ನು ನೈಋತ್ಯ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಸ್ತಾವನೆಯನ್ನು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಮುಂದಿಟ್ಟಿದ್ದಾರೆ.
ಸಂಸತ್‌ನ ಚಳಿಗಾಲದ ಅಧಿವೇಶದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕ್ಯಾ. ಚೌಟ ಅವರು, ಕರಾವಳಿ ಸೇರಿದಂತೆ ಮಂಗಳೂರು-ಬೆಂಗಳೂರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ವಿಭಾಗದಲ್ಲಿರುವ ಮಂಗಳೂರು ನಗರ ಭಾಗದ ರೈಲ್ವೆ ಲೈನ್‌ಗಳನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವ ಪ್ರಸ್ತಾಪ ರೈಲ್ವೆ ಇಲಾಖೆ ಬಳಿ ಇದೆಯೇ ? ಇದಕ್ಕೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸತ್ತಿನಲ್ಲಿ ರೈಲ್ವೆ ಸಚಿವರ ಗಮನ ಸೆಳೆದಿದ್ದಾರೆ.ಮಂಗಳೂರು-ಬೆಂಗಳೂರು ಅತ್ಯಂತ ಪ್ರಮುಖ ರೈಲ್ವೆ ಸಂಪರ್ಕವಾಗಿದೆ. ಶಿರಾಡಿ ಘಾಟಿಯಲ್ಲಿ ಹಳಿ ವಿಸ್ತರಣೆಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಅಧ್ಯಯನ ವರದಿ ಯಾವ ಹಂತದಲ್ಲಿದೆ?. ಶಿರಾಡಿ ಘಾಟಿಯಲ್ಲಿ ಹೊಸ ಹಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧ್ಯಯನ ವರದಿ ಪ್ರಗತಿ ಈಗ ಯಾವ ಹಂತ ತಲುಪಿದೆ?. ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಮಾರ್ಗ ಒಂದೇ ವಲಯದ ವ್ಯಾಪ್ತಿಗೆ ಬಂದರೆ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಆಡಳಿತಾತ್ಮಕವಾಗಿ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಮಂಗಳೂರು ನಗರ ಭಾಗದ ರೈಲ್ವೆ ಲೈನ್‌ಗಳನ್ನು ನೈಋತ್ಯ ವಲಯಕ್ಕೆ ಸೇರಿಸುವಲ್ಲಿ ಸಚಿವಾಲಯದ ಮುಂದೆ ಪ್ರಸ್ತಾವನೆ ಬಂದಿದೆಯೇ ಎಂದು ಸಂಸದರು ಸದನದಲ್ಲಿ ಕೇಳಿದ್ದಾರೆ.
ಹಳಿ ದ್ವಿಗುಣೀಕರಣ ಮಂಜೂರು: ಬೆಂಗಳೂರು ಹಾಗೂ ಮಂಗಳೂರು ಹಳಿ ದ್ವಿಗುಣೀಕರಣ(FLS )ಕ್ಕೆ ಸಂಬಂಧಿಸಿದಂತೆ ಎರಡು ಭಾಗವಾಗಿ ಮಂಜೂರಾತಿ ನೀಡಲಾಗಿದೆ.ಮಂಗಳೂರು-ಹಾಸನ (247 ಕಿ.ಮೀ.) ಹಾಗೂ ಹಾಸನ-ಚಿಕ್ಕಬಾಣಾವರ (ಬೆಂಗಳೂರು) ಕುಣಿಗಲ್ ಮೂಲಕ (166 ಕಿ.ಮೀ.) ಡಬ್ಲಿಂಗ್‌ಗೆ ಮಂಜೂರಾತಿಯಾಗಿದೆ. ಇದಲ್ಲದೆ, ಬೆಂಗಳೂರು ಮತ್ತು ತುಮಕೂರು ನಡುವಿನ 3 ಮತ್ತು 4ನೇ ಹಳಿಯ ಸಮೀಕ್ಷೆ ಕೂಡ ಮಂಜೂರಾಗಿದೆ. ಆದರೆ, ರಾಜ್ಯ ಸರ್ಕಾರದ ಪಾಲು ಬಾರದ ಕಾರಣ ಈ ಮಾರ್ಗದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬದಲಾವಣೆ ತರಬಲ್ಲ ಈ ಪ್ರಮುಖವಾದ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ಜೊತೆ ಚರ್ಚೆಗಳನ್ನು ನಡೆಸಲಾಗುವುದು ಎಂದು ಕ್ಯಾ. ಬ್ರಿಜೇಶ್ ಚೌಟ ಟ್ವೀಟ್ ಮಾಡಿದ್ದಾರೆ.
;Resize=(128,128))
;Resize=(128,128))