ಸಾರಾಂಶ
ಅನಂತಕುಮಾರ್ ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ರೈಲ್ವೆ ನಿಲ್ದಾಣದಿಂದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವ ದೃಷ್ಟಿಯಿಂದ, ಈ ರೈಲ್ವೆ ಮಾರ್ಗದ ಅಂತಿಮ ಸರ್ವೆ ಮಾಡಲು ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಹೊಸ ರೈಲು ಮಾರ್ಗದಿಂದ ಕಳೆದು ಹೋಗಿರುವ ಉಕ್ಕಿನ ನಗರದ ವೈಭವ ಪುನಃ ಮರಳಿ ಬರುವ ಆಶಾ ಭಾವನೆ ಇಲ್ಲಿನ ನಿವಾಸಿಗಳಲ್ಲಿ ವ್ಯಕ್ತವಾಗುತ್ತಿದೆ.ಈ ಹೊಸ ರೈಲು ಮಾರ್ಗ ಸ್ಥಾಪಿತವಾದ ನಂತರ ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಸಾಧ್ಯತೆಯಿಂದ ವ್ಯಾಪಾರ, ವ್ಯವಹಾರ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಬಲ ದೊರೆಯುತ್ತದೆ. ಇದರೊಂದಿಗೆ ಮಲೆನಾಡಿನ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ.ಜೊತೆಗೆ ಮಲೆನಾಡಿಗೆ ರಾಜ್ಯದ ಎಲ್ಲಾ ಮೂಲೆಗಳಿಗೆ ಉತ್ತಮ ಸಂಪರ್ಕ ದೊರೆಯುವ ಮೂಲಕ ಜನಸಾಮಾನ್ಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗುತ್ತದೆ. ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಕೂಡ ನಿರ್ಮಾಣವಾಗುತ್ತದೆ.ಈ ಹಿಂದೆ ನಗರದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆಗಳು ಆರಂಭಗೊಂಡ ಸಂದರ್ಭದಲ್ಲಿ ಅಂದಿನ ಮೈಸೂರು ಸಂಸ್ಥಾನ ಎರಡು ಕಾರ್ಖಾನೆಗಳಿಗೆ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಕಲ್ಲಿದ್ದಲು, ಬಿದಿರು ಸೇರಿದಂತೆ ಇನ್ನಿತರ ಕಚ್ಛಾ ಸಾಮ್ರಗಿಗಳನ್ನು ಪೂರೈಸಲು ರೈಲ್ವೆ ಸಂಪರ್ಕಗಳನ್ನು ಕಲ್ಪಿಸಿಕೊಟ್ಟಿತ್ತು. ನಂತರದ ದಿನಗಳಲ್ಲಿ ಈ ಸಂಪರ್ಕಗಳು ಕಣ್ಮರೆಯಾಗಿದ್ದು, ಇದರೊಂದಿಗೆ ಎರಡು ಕಾರ್ಖಾನೆಗಳ ಅವನತಿ ಸಹ ಆರಂಭಗೊಂಡಿತು. ಇದೀಗ ನಗರದಲ್ಲಿ ಹೊಸ ಕೈಗಾರಿಕೆಗಳಿಗೆ ಪೂರಕವಾಗುವಂತೆ ಹೊಸ ರೈಲ್ವೆ ಸಂಪರ್ಕಗಳಿಗೆ ಎದುರು ನೋಡುತ್ತಿದ್ದ ಇಲ್ಲಿನ ಕೈಗಾರಿಕೋದ್ಯಮಿಗಳಲ್ಲಿ ಭವಿಷ್ಯದ ಭರವಸೆಗಳನ್ನು ಮೂಡಿಸಿದೆ. ಬಜೆಟ್‌ನಲ್ಲಿ ಘೋಷಣೆ : ಭದ್ರಾವತಿಯಿಂದ ಚಿಕ್ಕಜಾಜೂರುವರೆಗೆ ನೂತನ ರೈಲ್ವೆ ಮಾರ್ಗ ಆರಂಭಿಸುವ ಕುರಿತು ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಸುಮಾರು ೧,೮೨೫ ಕೋ. ರು. ವೆಚ್ಚದ ೭೩ ಕಿ.ಮೀ ಉದ್ದದ ರೈಲ್ವೆ ಸಂಪರ್ಕಕ್ಕೆ ಅನುಮೋದನೆ ನೀಡಿತ್ತು. ಇದೀಗ ಕಾಮಗಾರಿ ಆರಂಭಿಸಲು ಅಂತಿಮ ಹಂತದ ಸರ್ವೆ ಕಾರ್ಯ ಕೈಗೊಳ್ಳಲು ಆದೇಶಿಲಾಗಿದೆ. ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಕಲ್ಪಿಸಲು ಪ್ರಸ್ತುತ ಯಾವುದೇ ರೈಲ್ವೆ ಮಾರ್ಗವಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸ ರೈಲ್ವೆ ಮಾರ್ಗ ಅನ್ವೇಷಣೆ ಕೈಗೊಂಡು ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ರೈಲ್ವೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಇದರ ಪರಿಣಾಮ ಹೊಸ ರೈಲ್ವೆ ಮಾರ್ಗ ಆರಂಭಗೊಳ್ಳುತ್ತಿದೆ. ಸಂಸದರಿಂದ ಕೃತಜ್ಞತೆ : ರೈಲ್ವೆ ಮಾರ್ಗದ ಅಂತಿಮ ಸರ್ವೆ ಮಾಡಲು ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು, ದೂರದೃಷ್ಟಿ ಇಟ್ಟುಕೊಂಡು ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯಗಳ ಹೆಚ್ಚಳ ಹಾಗೂ ನೂತನ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರರವರು ಭದ್ರಾವತಿ ನಗರದ ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಈ ಹೊಸ ರೈಲ್ವೆ ಮಾರ್ಗಕ್ಕೆ ಪ್ರಯತ್ನಿಸಿದ್ದರು. ಇದೀಗ ಅವರ ಪ್ರಯತ್ನ ಯಶಸ್ವಿಯಾಗುತ್ತಿದ್ದು, ಹೊಸ ರೈಲ್ವೆ ಮಾರ್ಗದ ಬಹುಮುಖ್ಯವಾದ ಮೊದಲನೇ ಉದ್ದೇಶ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅದಿರು ಪೂರೈಕೆ ಮಾಡಿಕೊಳ್ಳುವುದಾಗಿದೆ. ಉಳಿದಂತೆ ಎರಡನೇ ಉದ್ದೇಶ ಮಲೆನಾಡು ಭಾಗಕ್ಕೆ ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಕಲ್ಪಿಸುವುದಾಗಿದೆ. ಕೈಗಾರಿಕೆಗಳ ಬೆಳವಣಿಗೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಈ ಹೊಸ ರೈಲ್ವೆ ಮಾರ್ಗ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು, ಕೇಂದ್ರ ರೈಲ್ವೆ ಸಚಿವರು, ರಾಜ್ಯ ಖಾತೆ ಸಚಿವರು ಹಾಗೂ ಸಂಸದರಿಗೆ, ರೈಲ್ವೆ ಅಧಿಕಾರಿಗಳಿಗೆ ಮತ್ತು ಈ ನಿಟ್ಟಿನಲ್ಲಿ ಶ್ರಮಿಸಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.- ಮಂಗೋಟೆ ರುದ್ರೇಶ್, ಯುವ ಮುಖಂಡರು, ಭದ್ರಾವತಿ