ಸಾರಾಂಶ
ಕೆಲಸದ ಒತ್ತಡ, ರಜೆ ನಿರಾಕರಣೆ ಮುಂತಾದ ಗಂಭೀರ ಸಮಸ್ಯೆಗಳ ಪರಿಹಾರ ವಿಷಯದಲ್ಲಿ ಫಾಲ್ಘಾಟ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ರೈಲ್ವೆ ಚಾಲಕರ ಸಂಘಟನೆ ಆಲ್ ಇಂಡಿಯಾ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ (ಎಐಎಲ್‌ಆರ್‌ಎಸ್‌ಎ) ನೇತೃತ್ವದಲ್ಲಿ ಮಂಗಳೂರು ಜಂಕ್ಷನ್ ನಿಲ್ದಾಣ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕೆಲಸದ ಒತ್ತಡ, ರಜೆ ನಿರಾಕರಣೆ ಮುಂತಾದ ಗಂಭೀರ ಸಮಸ್ಯೆಗಳ ಪರಿಹಾರ ವಿಷಯದಲ್ಲಿ ಫಾಲ್ಘಾಟ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ರೈಲ್ವೆ ಚಾಲಕರ ಸಂಘಟನೆ ಆಲ್ ಇಂಡಿಯಾ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ (ಎಐಎಲ್‌ಆರ್‌ಎಸ್‌ಎ) ನೇತೃತ್ವದಲ್ಲಿ ಮಂಗಳೂರು ಜಂಕ್ಷನ್ ನಿಲ್ದಾಣ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.ಅಸೋಸಿಯೇಷನ್‌ನ ವಿಭಾಗೀಯ ಅಧ್ಯಕ್ಷ ಪಿ.ಕೆ.ಅಶೋಕನ್ ಮಾತನಾಡಿ, ಹೆಚ್ಚುತ್ತಿರುವ ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಮತ್ತು ಮಾನಸಿಕ ಯಾತನೆಯಿಂದ ಬಳಲುತ್ತಿರುವವರ ಸಂಖ್ಯೆ ಇಲಾಖೆಯಲ್ಲಿ ಹೆಚ್ಚುತ್ತಿದೆ. ಇಬ್ಬರು ವ್ಯಕ್ತಿಗಳ ಕೆಲಸವನ್ನು ಒಬ್ಬರ ಮೇಲೆ ಹೇರಿದಾಗ ಅತಿಯಾದ ಕೆಲಸದ ಒತ್ತಡ ಉಂಟಾಗುತ್ತಿದೆ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಕೆ.ಕೆ.ಕೇಶವನ್ ಮಾತನಾಡಿ, ಇಲಾಖೆಯಲ್ಲಿ ಹುದ್ದೆಗಳನ್ನು ನಿರಂತರವಾಗಿ ಕಡಿಮೆಗೊಳಿಸಲಾಗುತ್ತಿದೆ. 2024 ರ ವೇಳೆಗೆ ಚಾಲಕರ ಕೊರತೆಯಿಂದ ರೈಲುಗಳು ಪ್ರಯಾಣದ ನಡುವೆ ಅಲ್ಲಲ್ಲಿ ಸ್ಥಗಿತಗೊಳ್ಳುವ ಹಂತ ತಲುಪಿದೆ ಎಂದರು.ರೈಲ್ವೆ ಮಂಡಳಿಯ ಸ್ವಂತ ಅಂದಾಜಿನ ಪ್ರಕಾರ ಶೇ.30ರಷ್ಟು ಲೊಕೊಮೊಟಿವ್ ಪೈಲಟ್ ಹುದ್ದೆಗಳನ್ನು ರಜೆ ಉದ್ದೇಶಗಳಿಗಾಗಿ ಕಾಯ್ದಿರಿಸಬೇಕು. ಅಸೋಸಿಯೇಶನ್‌ನ ನಿರಂತರ ಪ್ರತಿಭಟನೆಗಳ ಪರಿಣಾಮವಾಗಿ 2018 ರಲ್ಲಿ ಉದ್ಯೋಗಿಗಳ ಲೆಕ್ಕಾಚಾರಕ್ಕಾಗಿ ಶೇ.10 ತರಬೇತಿ ಮೀಸಲು ಕಡ್ಡಾಯಗೊಳಿಸಲಾಯಿತು. ಆದರೆ ಇಂದು ಶೇ.5ಕ್ಕಿಂತ ಕಡಿಮೆ ಹುದ್ದೆಗಳನ್ನು ರಜೆಗಾಗಿ ಕಾಯ್ದಿರಿಸಲಾಗಿದೆ. ಪರಿಣಾಮ ತೀವ್ರ ಸಿಬ್ಬಂದಿ ಕೊರತೆ ನಡುವೆ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಲೋಕೋ ಪೈಲಟ್‌ಗಳು ಹಾಗೂ ಅವರ ಕುಟುಂಬಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.