ಸಾರಾಂಶ
ರೈಲ್ವೆ ಘಾಟ್ಟ್ ಹಳಿ ವಿದ್ಯುದೀಕರಣ ಕಾಮಗಾರಿ ಜೂನ್ನ್‌ಗೆ ಪೂರ್ಣಗೊಳ್ಳಲಿದೆ
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು-ಪುತ್ತೂರು ನಡುವಿನ ರೈಲು ಹಳಿ ವಿದ್ಯುದೀಕರಣ ಪೂರ್ಣಗೊಂಡಿದ್ದು, ಪುತ್ತೂರು-ಸುಬ್ರಹ್ಮಣ್ಯ ಮಾರ್ಗ ವಿದ್ಯುದೀಕರಣ ಡಿಸೆಂಬರ್ ಮಧ್ಯಭಾಗ ಕೊನೆಗೊಳ್ಳಲಿದೆ. ಸುಬ್ರಹ್ಮಣ್ಯ ಮಾರ್ಗದಿಂದ ಸಕಲೇಶಪುರ ವರೆಗಿನ ಘಾಟ್ ಪ್ರದೇಶದಲ್ಲಿ ವಿದ್ಯುದೀಕರಣ ಕಾಮಗಾರಿ 2024 ಜೂನಿಗೆ ಮುಕ್ತಾಯಗೊಳಿಸುವ ಇರಾದೆ ಹೊಂದಲಾಗಿದೆ ಎಂದು ಮೈಸೂರು ವಿಭಾಗೀಯ ಎಡಿಆರ್‌ಎಂ ವಿಜಯಾ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೆ ವಿಭಾಗಗಳ ಸಮನ್ವಯ ಸಮಿತಿ ಸಭೆಯಲ್ಲಿ ಈ ಮಾತು ಹೇಳಿದರು. ಅಮೃತ್ ಭಾರತ್ ಯೋಜನೆಯಲ್ಲಿ ಸುಬ್ರಹ್ಮಣ್ಯ ಮಾರ್ಗ ಮತ್ತು ಬಂಟ್ವಾಳ ರೈಲು ನಿಲ್ದಾಣಗಳ ಸಮಗ್ರ ಅಭಿವೃದ್ಧಿ ನಡೆಸಲಾಗುತ್ತಿದೆ. ಮೇ ತಿಂಗಳ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅಡ್ಯಾರಿನಲ್ಲಿ ರೈಲ್ವೆ ಕೆಳಸೇತುವೆ ರಚನೆಗೆ 1.50 ಕೋಟಿ ರು. ಮಂಜೂರಾಗಿದ್ದು, ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದರು. ಹೆಚ್ಚುವರಿ ಫ್ಲ್ಯಾಟ್‌ಫಾರಂ ಜನವರಿಗೆ ಪೂರ್ಣ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 4 ಮತ್ತು 5ನೇ ಫ್ಲ್ಯಾಟ್‌ಫಾರಂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ರೈಲು ಸಂಚಾರ ನಡೆಯುತ್ತಿದೆ. ಆದರೆ ಪಾದಚಾರಿ ಮೇಲ್ಸೇತುವೆ, ಪ್ರಯಾಣಿಕರಿಗೆ ಶೆಲ್ಟರ್ ನಿರ್ಮಾಣ, ಕುಡಿಯುವ ನೀರು ಸೌಲಭ್ಯ ಇನ್ನಷ್ಟೆ ಆಗಬೇಕು. ಈ ಎಲ್ಲ ಕಾಮಗಾರಿ ಜನವರಿ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ ಎಂದು ಫಾಲ್ಘಾಟ್ ವಿಭಾಗೀಯ ಅಧಿಕಾರಿ ಮಾಹಿತಿ ನೀಡಿದರು. ರೈಲು ಸಂಘಟನೆಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಮಂಗಳೂರು ಜಂಕ್ಷನ್ ವರೆಗಿನ ಮುಂಬೈ ಸಿಎಸ್‌ಟಿ ಎಕ್ಸ್‌ಪ್ರೆಸ್, ವಿಜಯಪುರ ಎಕ್ಸ್‌ಪ್ರೆಸ್, ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಗೊಮಟೇಶ್ವರ ಎಕ್ಸ್‌ಪ್ರೆಸ್ ಹಾಗೂ ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಹಗಲು ರೈಲು ಸಂಚಾರವನ್ನು ವೇಳಾಪಟ್ಟಿಯಲ್ಲಿರುವಂತೆ ಮಂಗಳೂರು ಜಂಕ್ಷನ್‌ನಿಂದ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಮಂಗಳೂರು-ಪುತ್ತೂರು ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆಗೆ ಅಧಿಕಾರಿ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ ಎಂದರು. ವಂದೇ ಭಾರತ್ ಶೀಘ್ರ:ಮಂಗಳೂರು-ಮಡ್ಗಾಂವ್ ನಡುವೆ ಶೀಘ್ರವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿಪಡಿಸಿ ಮಂಗಳೂರು ಸೆಂಟ್ರಲ್ ಹೆಚ್ಚುವರಿ ಫ್ಲ್ಯಾಟ್‌ಫಾರಂ ಲೋಕಾರ್ಪಣೆ ಹಾಗೂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಘಾಟ್ ಪ್ರದೇಶ ಹಳಿ ವಿದ್ಯುದೀಕರಣ ಬಳಿಕ ಮಂಗಳೂರು-ಬೆಂಗಳೂರು ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಮಾತನಾಡಿ, ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ನಡುವಿನ 1 ಕಿ.ಮೀ. ದೂರ ದ್ವಿಹಳಿಯ ಅಗತ್ಯವಿದೆ. ಇಲ್ಲಿ ಸಿಂಗಲ್ ಹಳಿಯಿಂದಾಗಿ ಹೆಚ್ಚುವರಿ ರೈಲು ಸಂಚಾರ ಸಾಧ್ಯವಿಲ್ಲದಂತಾಗಿದೆ ಎಂದು ಗಮನ ಸೆಳೆದರು. ರೈಲ್ವೆ ಸಲಹೆಗಾರ ಅನಿಲ್ ಹೆಗ್ಡೆ ಮಾತನಾಡಿ, ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದ ಎಡಕುಮೇರಿ ಮತ್ತು ಕಡಗರಗಳಲ್ಲಿ ಕ್ಯಾಚ್ ಸ್ಲೈಡಿಂಗ್ ನಡೆಸಬೇಕಾಗಿದೆ. ಮಂಗಳೂರು-ಸುಬ್ರಹ್ಮಣ್ಯ ನಡುವಿನ ರೈಲು ಸಂಚಾರದ ವೇಗ 90 ಕಿ.ಮೀ. ಗೆ ಹೆಚ್ಚಳವಾಗಬೇಕು ಎಂದು ಆಗ್ರಹಿಸಿದರು. ಮಾಂಕಾಳಿಪಡ್ಪುವಿನಲ್ಲಿ ರೈಲ್ವೆ ಕಾಮಗಾರಿಯನ್ನು ತ್ವರಿಗೊಳಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಗಮನ ಸೆಳೆದರು. ವಳಚ್ಚಿಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಸಂಪರ್ಕ ರಸ್ತೆಗೆ ರೈಲ್ವೆ ಅನುಮತಿ ನೀಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದರು. ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಫಾಲ್ಘಾಟ್ ರೈಲ್ವೆ ಡಿಆರ್‌ಎಂ ಅರುಣ್ ಕುಮಾರ್ ಚತುರ್ವೇದಿ, ಎಡಿಆರ್‌ಎಂ ಜಯಕೃಷ್ಣನ್, ಕೊಂಕಣ್ ರೈಲ್ವೆ ಹಿರಿಯ ಪ್ರಾದೇಶಿಕ ನಿಯಂತ್ರಣಾಧಿಕಾರಿ ವಿನಯ ಕುಮಾರ್, ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಮಾಣಿಕ್ಯ ಇದ್ದರು. ಸಮಸ್ಯೆಗಳ ಆಗರ ಬಂಟ್ವಾಳ ರೈಲು ನಿಲ್ದಾಣ!ಬಂಟ್ವಾಳ ರೈಲು ನಿಲ್ದಾಣ ಸಮಸ್ಯೆಗಳ ಆಗರವಾಗಿದೆ. ರೈಲು ನಿಲ್ದಾಣದ ಆವರಣ ಹಾಗೂ ಹಳಿಗಳಲ್ಲಿ ಕಸ, ಕೊಂಪೆ ಇದ್ದು, ಶೌಚಾಲಯ ಕೂಡ ಸ್ವಚ್ಛವಾಗಿಲ್ಲ. ಇಲ್ಲಿ ಅನೈತಿಕ ಚಟುವಟಿಕೆ, ಗಾಂಜಾ ಅಡ್ಡೆ, ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ರೈಲ್ವೆ ಪೊಲೀಸರಿಗೆ, ಮೈಸೂರು ವಿಭಾಗೀಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಹೋರಾಟಗಾರ ಲಕ್ಷ್ಮೀನಾರಾಯಣ ದೂರಿದರು. ಸೋಮವಾರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಈ ಸಮಸ್ಯೆಗಳ ನಿವಾರಣೆಗೆ ತ್ವರಿತವಾಗಿ ಸ್ಪಂದಿಸುವಂತೆ ಸಂಸದ ನಳಿನ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.