ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ದೇಶ-ವಿದೇಶಗಳ ವಿಶೇಷ ಆಕರ್ಷಣೀಯ ಪ್ರವಾಸಿ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಆಯೋಜಿಸುತ್ತಿದೆ.ದಕ್ಷಿಣ ಕೊರಿಯಾ, ಯುರೋಪ್, ನೇಪಾಳ, ಶ್ರೀಲಂಕಾ, ಊಟಿ, ಅಯೋಧ್ಯೆ, ಕಾಶ್ಮೀರ ಮುಂತಾದ ದೇಶ- ವಿದೇಶಗಳ ವಿಶೇಷ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಪ್ರಕಟಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜನಕ್ಕೆ ಮುಂದಾಗಿದೆ. ಭಾರತೀಯ ರೈಲ್ವೆಯಡಿ ಕಾರ್ಯನಿರ್ವಹಿಸುವ ಐಆರ್‌ಸಿಟಿ ಇದನ್ನು ಆಯೋಜಿಸುತ್ತಿದೆ ಎಂದು ಆರ್‌ಸಿಟಿಸಿ ಜಂಟಿ ಮಹಾ ಪ್ರಬಂಧಕ (ಪ್ರವಾಸೋದ್ಯಮ) ಸ್ಯಾಮ್ ಜೋಸೆಫ್ ಮಂಗಳೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಮೇ 16 ರಂದು ಅಯೋಧ್ಯೆ, ವಾರಣಾಸಿ:ಮಂಗಳೂರಿನಿಂದ ವಾರಣಾಸಿ, ಅಯೋಧ್ಯೆ, ಪ್ರಯಾಗ್‌ರಾಜ್ ಏರ್ ಟೂರ್ ಪ್ಯಾಕೇಜ್ ಇದೆ. ಅಯೋಧ್ಯೆ ದರ್ಶನದೊಂದಿಗೆ ವಾರಣಾಸಿಗೆ ವಿಶೇಷ ವಿಮಾನ ಪ್ಯಾಕೇಜ್ ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಮೇ 16 ರಂದು ಪ್ರವಾಸ ಆರಂಭವಾಗಲಿದೆ ಎಂದರು.
ಮಂಗ್ಳೂರಿನಿಂದ ಕಾಶ್ಮೀರ ಏರ್ ಟೂರ್:ವಿಶೇಷ 6 ದಿನಗಳ ವಿಮಾನ ಪ್ರಯಾಣದೊಂದಿಗೆ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುವ ಕಾಶ್ಮೀರಕ್ಕೆ ಮಂಗಳೂರಿನಿಂದ ನೇರ ಪ್ರವಾಸ ಆಯೋಜಿಸಲಾಗಿದೆ. ಆಗಸ್ಟ್ 25 ರಂದು ಶುರುವಾಗಿ ಐದು ರಾತ್ರಿಗಳಲ್ಲಿ ಕೊನೆಗೊಳ್ಳಲಿದೆ.
ಪ್ರಸ್ತಾವಿತ ದೇಶೀಯ ವಿಮಾನ ಪ್ಯಾಕೇಜ್‌ಗಳಲ್ಲಿ ರೌಂಡ್ ಟ್ರಿಪ್ ವಿಮಾನ ದರ, ಸ್ಥಳೀಯ ಸಾರಿಗೆ, ಊಟದೊಂದಿಗೆ ಹೋಟೆಲ್ ವಸತಿ, ಪ್ರವಾಸ ಸಂಯೋಜಕರ ಸೇವೆ ಮತ್ತು ಪ್ರಯಾಣ ವಿಮೆ ಸೇರಿವೆ ಎಂದರು.ಮಂಗ್ಳೂರು-ಊಟಿ ರೈಲು ಪ್ರವಾಸ: ಪ್ರತಿ ಗುರುವಾರ ಮಂಗಳೂರಿನಿಂದ ಹೊರಡುವ ಊಟಿಗೆ ಐಆರ್‌ಸಿಟಿಸಿ ಐದು ದಿನಗಳ ರೈಲು ಪ್ರವಾಸ ಪ್ಯಾಕೇಜನ್ನು ಆರಂಭಿಸಿದೆ. ಈ ಪ್ಯಾಕೇಜ್ ರೌಂಡ್ ಟ್ರಿಪ್ ರೈಲು ಟಿಕೆಟ್, ಸ್ಥಳೀಯ ಸಾರಿಗೆ, ಹೋಟೆಲ್ ವಸತಿ ಮತ್ತು ಪ್ರಯಾಣ ವಿಮೆ ಒಳಗೊಂಡಿದೆ. ಬೆಂಗ್ಳೂರಿಂದ ಅಂತಾರಾಷ್ಟ್ರೀಯ ಪ್ಯಾಕೇಜ್:
ಬೆಂಗಳೂರಿನಿಂದ ಮೇ 3 ರಂದು ಎಂಟು ದಿನಗಳ ದಕ್ಷಿಣ ಕೊರಿಯಾ ಪ್ರವಾಸ ಆರಂಭಗೊಳ್ಳಲಿದೆ.ಬೆಂಗಳೂರುನಿಂದ ಮೇ 19 ರಂದು ಹೊರಡುವ 13 ದಿನಗಳ ಯುರೋಪ್ ಪ್ರವಾಸ ಪ್ಯಾಕೇಜ್ ಪ್ರಕಟಿಸಲಾಗಿದೆ.
ಕೇರಳ ರಾಜ್ಯದ ಕೊಚ್ಚಿಯಿಂದ ಮೇ 22 ರಂದು ಹೊರಡುವ 6 ದಿನಗಳ ನೇಪಾಳ ಏರ್ ಟೂರ್ ಪ್ಯಾಕೇಜ್, ಕೊಚ್ಚಿಯಿಂದ ಮೇ 27 ರಂದು ಹೊರಡುವ 7 ದಿನಗಳ ಶ್ರೀಲಂಕಾ ಏರ್ ಟೂರ್ ಪ್ಯಾಕೇಜ್‌ನಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನಾವಕಾಶ ಇದೆಎಂದರು.ರಜೆಯ ಪ್ರಯಾಣ ರಿಯಾಯಿತಿ (ಎಲ್ಟಿಸಿ) ಸೌಲಭ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಎಲ್ಲ ದೇಶೀಯ ಪ್ರವಾಸ ಪ್ಯಾಕೇಜ್‌ಗಳಿಗೆ ಲಭ್ಯವಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ಜಾಲತಾಣ www.irctctourism.com ಅಥವಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ: 8287932064 / 8287932042 ಸಂಪರ್ಕಿಸುವಂತೆ ಸೂಚಿಸಲಾಗಿದೆ.
ನಿಗಮದ ಸೀನಿಯರ್ ಎಕ್ಸಿಕ್ಯೂಟಿವ್ ವಿನೋದ್ ನಾಯರ್, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ರಾಜನ್ ನಂಬಿಯಾರ್, ಮೈಸೂರು ರೈಲ್ವೆ ನಿಲ್ದಾಣದ ಅಧಿಕಾರಿ ಇಮ್ರಾನ್ ಅಹ್ಮದ್ ಇದ್ದರು.