ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಮಹಾವೀರ ವೃತ್ತದಿಂದ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಳೆ ನೀರಿನಿಂದ ಅಂಡರ್ ಪಾಸ್ ಒಳಗೆ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಅವಾಂತರಗಳು ಸೃಷ್ಟಿಯಾಗದಂತೆ ಈಗಲೇ ಮುಂಜಾಗ್ರತೆ ವಹಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಮಳೆ ನೀರು ಅಂಡರ್‌ಪಾಸ್ ಒಳಗೆ ಪ್ರವೇಶಿಸದಂತೆ ಮಹಾವೀರ ವೃತ್ತದ ಆರಂಭದಿಂದ ಅಂಡರ್‌ಪಾಸ್ ಪ್ರವೇಶದ್ವಾರದವರೆಗೆ ಕಬ್ಬಿಣದ ರೂಫ್ ನಿರ್ಮಾಣ ಮಾಡಲಾಗುತ್ತಿದೆ. ಅದರ ಮೇಲೆ ಕಬ್ಬಿಣದ ಶೀಟ್ ಹಾಕಿ ಮಳೆ ನೀರು ಒಳಗೆ ಬಾರದಂತೆ ಜಾಗ್ರತೆ ವಹಿಸಲಾಗಿದೆ. ಒಮ್ಮೆ ಮಳೆ ನೀರು ಅಂಡರ್‌ಪಾಸ್‌ನತ್ತ ಹರಿದುಬಂದರೂ ಸಂಚಾರಕ್ಕೆ ಅಡಚಣೆಯಾಗದಂತೆ ಚಿಕ್ಕದಾಗಿ ನಿರ್ಮಿಸಲಾಗಿರುವ ಕಾಲುವೆ ಮೂಲಕ ಮಳೆ ನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.ಅಂಡರ್‌ಪಾಸ್ ನಿರ್ಮಾಣವಾಗಿರುವ ಅಕ್ಕ-ಪಕ್ಕದಲ್ಲೂ ಚರಂಡಿ ನಿರ್ಮಿಸಲಾಗಿದೆ. ಕಬ್ಬಿಣದ ರೂಫ್ ಮೇಲೆ ಬೀಳುವ ಮಳೆ ನೀರು ಗಾಂಧಿ ಉದ್ಯಾನವನದೊಳಗೆ ಮತ್ತು ನಗರಸಭೆ ಮಳಿಗೆಗಳಿರುವ ಕಡೆಗೂ ನೀರು ಹರಿಯದಂತೆ ಚರಂಡಿ ನಿರ್ಮಿಸಲಾಗಿದೆ. ಆ ನೀರು ಎಲ್ಲೂ ಸಂಗ್ರಹವಾಗದಂತೆ ಚರಂಡಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ.
ಈಗಾಗಲೇ ನಗರದ ಹೊಳಲು ವೃತ್ತ ಸಂಪರ್ಕಿಸುವ ರೈಲ್ವೆ ಅಂಡರ್‌ಪಾಸ್ ನಿರ್ಮಾಣವಾದ ಆರಂಭದಲ್ಲಿ ಮಳೆ ನೀರು ಸೇರಿದಂತೆ ಚರಂಡಿ ನೀರು ಕೂಡ ರಸ್ತೆಯಲ್ಲೇ ನಿಂತು ಸಾಕಷ್ಟು ಅವಾಂತರ ಸೃಷ್ಟಿಸುತ್ತಿತ್ತು. ನಂತರದ ಕೆಲ ವರ್ಷಗಳ ಬಳಿಕ ಸಮಸ್ಯೆಗೆ ಪರಿಹಾರ ಸೂಚಿಸಿದ್ದರೂ ಸಂಪೂರ್ಣವಾಗಿ ಸಮಸ್ಯೆಗೆ ಮುಕ್ತಿ ದೊರಕಿಲ್ಲ.ನಗರದ ಹಲವಾರು ಕಡೆಗಳಲ್ಲಿ ಮಳೆ ಬಿದ್ದಾಗಲೆಲ್ಲಾ ನೀರು ರಸ್ತೆಗಳಲ್ಲಿ ಜಲಾವೃತಗೊಂಡು ದೊಡ್ಡ ಅವಾಂತರವನ್ನೇ ಸೃಷ್ಟಿಸುತ್ತಿದೆ. ಅದೇ ಅವಾಂತರ ಮಹಾವೀರ ವೃತ್ತ ರೈಲ್ವೆ ಅಂಡರ್‌ಪಾಸ್ ಬಳಿ ಎದುರಾಗದಂತೆ ಮಳೆ ನೀರನ್ನೇ ಗುರಿಯಾಗಿಸಿಕೊಂಡು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅಂಡರ್‌ಪಾಸ್ ಉದ್ದಕ್ಕೂ ಎಲ್ಲಿಯೂ ಸೋರಿಕೆಯಾಗದಂತೆ ಮಳೆ ನೀರಿನಿಂದ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಈಗಿನಿಂದಲೇ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಯಾವ ಯಾವ ಭಾಗದಿಂದ ಅಂಡರ್‌ಪಾಸ್ ಕಡೆಗೆ ನೀರು ಹರಿದುಬರುವುದೋ ಅದೆಲ್ಲವನ್ನೂ ಗುರುತಿಸಿ ನೀರು ರಸ್ತೆಯಲ್ಲಿ ನಿಲ್ಲದಂತೆ ಹಾಗೂ ಅಂಡರ್‌ಪಾಸ್ ಒಳಗೂ ನುಗ್ಗದಂತೆ ನೇರವಾಗಿ ಚರಂಡಿ ಸೇರುವಂತೆ ಕ್ರಮ ವಹಿಸಲಾಗುತ್ತಿದೆ.ಈಗಾಗಲೇ ಕಬ್ಬಿಣದ ಮೇಲ್ಛಾವಣಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕಬ್ಬಿಣದ ಶೀಟ್ ಅಳವಡಿಸುವ ಕಾರ್ಯ ನಡೆಯಬೇಕಿದೆ. ಅದನ್ನೂ ಶೀಘ್ರಗತಿಯಲ್ಲಿ ಕೈಗೊಳ್ಳುವುದಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ತಿಳಿಸಿದರು.
ಈಗಾಗಲೇ ವಾಹನಗಳನ್ನು ಹೊರತುಪಡಿಸಿ ಮಹಾವೀರ ವೃತ್ತದ ಕಡೆಯಿಂದ ಪೇಟೆಬೀದಿಗೆ ಪಾದಚಾರಿಗಳು ಸಂಚರಿಸುತ್ತಿದ್ದಾರೆ. ಪಾದಚಾರಿಗಳು ಪೇಟೆಬೀದಿಗೆ ಸುಲಭವಾಗಿ ತೆರಳುವಂತೆ ಕಬ್ಬಿಣದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಪಾದಚಾರಿ ಮಾರ್ಗ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನಗಳು ತೆರಳಲು ಅನುಕೂಲವಾಗುವಂತೆ ಕೆಲವೊಂದು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಮಹಾವೀರ ವೃತ್ತದ ಕಡೆಯಿಂದ ತೆರಳುವ ವಾಹನಗಳು ಪೇಟೆಬೀದಿ ಸೇರುವಂತೆ ಸಂಪರ್ಕ ಕಲ್ಪಿಸಬೇಕಿರುವುದು ಬಾಕಿ ಉಳಿದಿದೆ. ಈ ನಡುವೆ ಕಬ್ಬಿಣದ ತಡೆಗೋಡೆಗಳನ್ನು ಅಳವಡಿಸಿದ್ದರೂ ಕೆಲವೊಂದು ದ್ವಿಚಕ್ರವಾಹನಗಳು ಕಿರಿದಾದ ಜಾಗದಲ್ಲಿ ನುಸುಳಿಕೊಂಡು ಸಾಗುತ್ತಿರುವ ದೃಶ್ಯ ಕಂಡುಬರುತ್ತಿದೆ.ಮೂರು ತಿಂಗಳೊಳಗೆ ಮುಗಿಯಬೇಕಿದ್ದ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಆರು ತಿಂಗಳಾದರೂ ಪೂರ್ಣಗೊಂಡಿಲ್ಲದಿರುವುದಕ್ಕೆ ಮಧ್ಯೆ ಮಧ್ಯೆ ಎದುರಾದ ನಾನಾ ರೀತಿಯ ಸಮಸ್ಯೆಗಳು ಕಾರಣವಾದವು. ಅಂಡರ್‌ಪಾಸ್ ನಡುವೆ ಕುಡಿಯುವ ನೀರಿನ ಪೈಪ್‌ಲೈನ್ ಹಾದುಹೋಗಿದ್ದರಿಂದ ಅದರ ಮಾರ್ಗ ಬದಲಾವಣೆ ಕಾಮಗಾರಿ ನಡೆಸಬೇಕಿದ್ದರಿಂದ ವಿಳಂಬವಾಯಿತು. ಪೈಪ್‌ಲೈನ್ ಒಡೆದು ನೀರು ತುಂಬಿಕೊಂಡಿದ್ದರಿಂದ ಒಂದರಿಂದ ಒಂದೂವರೆ ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು.
ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಈಗ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಕಾಮಗಾರಿ ನಿರಂತರವಾಗಿ ಸಾಗುತ್ತಿರುವುದರಿಂದ ಶೀಘ್ರ ಪೂರ್ಣಗೊಳ್ಳಲಿದ್ದು, ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.