ಸಾರಾಂಶ
ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನವಯುಗ್ ಎಕ್ಸ್‌ಪ್ರೆಸ್ ರೈಲು (16687/16688) ಸಂಚಾರ ಸ್ಥಗಿತಗೊಳಿಸಿ ಐದು ವರ್ಷಗಳಾದರೂ ಸಂಚಾರ ಪುನರಾರಂಭಗೊಳಿಸಿಲ್ಲ. ಈ ರೈಲಿನ ಸಂಚಾರವನ್ನು ವಯಾ ಹಾಸನ ಮೂಲಕ ಏರ್ಪಡಿಸುವಂತೆ ರೈಲ್ವೆ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಕೇರಳ ಮಾರ್ಗದ ಬದಲು ವಯಾ ಹಾಸನ ಮೂಲಕ ಸಂಚಾರಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮತ್ತು ಜಮ್ಮು-ಕಾಶ್ಮೀರ ನಡುವೆ ಸಂಚರಿಸುತ್ತಿದ್ದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನವಯುಗ್ ಎಕ್ಸ್‌ಪ್ರೆಸ್ ರೈಲು (16687/16688) ಸಂಚಾರ ಸ್ಥಗಿತಗೊಳಿಸಿ ಐದು ವರ್ಷಗಳಾದರೂ ಸಂಚಾರ ಪುನರಾರಂಭಗೊಳಿಸಿಲ್ಲ. ಈ ರೈಲಿನ ಸಂಚಾರವನ್ನು ವಯಾ ಹಾಸನ ಮೂಲಕ ಏರ್ಪಡಿಸುವಂತೆ ರೈಲ್ವೆ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.ಕೊರೋನಾ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳ ರೈಲು ಸಂಚಾರ ಸ್ಥಗಿತಗೊಂಡಿತ್ತು. ಅಂತೆಯೇ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನವಯುಗ್ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಕೂಡ ಸ್ಥಗಿತಗೊಳಿಸಲಾಗಿತ್ತು. ಇತರ ರೈಲುಗಳ ಸಂಚಾರ ಆರಂಭವಾಗಿದ್ದರೂ ಈ ರೈಲಿನ ಸಂಚಾರ ಪುನರಾರಂಭವಾಗಿಲ್ಲ.ಇದು ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಿನ ಏಕೈಕ ನೇರ ಸಂಪರ್ಕದ ರೈಲು ಆಗಿತ್ತು. ಯಾತ್ರಾರ್ಥಿಗಳು, ಸೈನಿಕರು, ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿಗೆ ಇದರಿಂದ ಪ್ರಯೋಜನವಿತ್ತು.4ನೇ ದೊಡ್ಡ ರೈಲು ಯಾನ
ಮಂಗಳೂರು ಸೆಂಟ್ರಲ್-ಶ್ರೀಮಾತಾ ವೈಷ್ಣೋದೇವಿ ಕತ್ರಾ ನವಯುಗ ಎಕ್ಸ್‌ಪ್ರೆಸ್ ರೈಲು 1990ರಲ್ಲಿ ಮಂಗಳೂರಿನಿಂದ ಜಮ್ಮು ತಾವಿ ತನಕ ಸಂಚರಿಸುತ್ತಿತ್ತು. ಇದನ್ನು 2015ರಲ್ಲಿ ಕತ್ರಾವರೆಗೆ ವಿಸ್ತರಿಸಲಾಗಿತ್ತು. ಪ್ರತಿ ಸೋಮವಾರ ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಾಕ್ಕೆ ತಲುಪುತ್ತಿತ್ತು. ದಾರಿಯುದ್ದಕ್ಕೂ ದೇಶದ ಪ್ರಸಿದ್ದ ಯಾತ್ರಾಸ್ಥಳಗಳನ್ನು ಸಂಪರ್ಕಿಸುತ್ತಿತ್ತು. ಒಟ್ಟು 3,686 ಕಿ.ಮೀ. ಕ್ರಮಿಸಲು 70 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತಿತ್ತು. 13 ರಾಜ್ಯಗಳನ್ನು ದಾಟಿ ಹೋಗುತ್ತಿತ್ತು. ರೈಲು ಪ್ರಯಾಣ ದೂರದ ಪ್ರಕಾರವಾಗಿ ದೇಶದ 4ನೇ ದೊಡ್ಡ ರೈಲು ಎಂಬ ಖ್ಯಾತಿಗೆ ಪಾತ್ರವಾಗಿತ್ತು.ಪರಿಷ್ಕೃತ ಮಾರ್ಗದ ಬೇಡಿಕೆ: ಈ ರೈಲನ್ನು ಪುನರಾರಂಭಿಸುವಾಗ ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮಿರಾಜ್ ಮತ್ತು ಪುಣೆ ಮಾರ್ಗವಾಗಿ ಪರಿಷ್ಕೃತ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು ಎಂಬುದು ಸದ್ಯದ ಬೇಡಿಕೆ. ಈ ಹಿಂದೆ ಮಂಗಳೂರು ಸೆಂಟ್ರಲ್‌ನಿಂದ ಕಾಸರಗೋಡು-ಪಾಲಕ್ಕಾಡ್ ಮೂಲಕ ಸಂಚರಿಸುತ್ತಿತ್ತು. ತಿರುನೆಲ್ವೆಲಿಯಿಂದ ಕತ್ರಾಕ್ಕೆ ಹೋಗುವ ರೈಲು ಸ್ವತಂತ್ರವಾಗಿ ಓಡುತ್ತಿರುವ ಕಾರಣ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು-ಹಾಸನ-ಮೀರಜ್-ಪುಣೆ-ದೆಹಲಿ ಮಾರ್ಗದಲ್ಲಿ ಓಡಿಸಬೇಕು ಎಂದು ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರ ಸಮಿತಿ ಅಧ್ಯಕ್ಷ ಶಂಕರನಾರಾಯಣ ಕೆ. ಅವರು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.