ಸಾರಾಂಶ
ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರಣ್ ಮಾಥುರ್ ಅವರು ಯಶವಂತಪುರ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಮರು ಅಭಿವೃದ್ಧಿ ಆಗುತ್ತಿರುವ ಯಶವಂತಪುರ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ (ಜಿಎಂ) ಮುಕುಲ್ ಸರಣ್ ಮಾಥುರ್ ಸೂಚಿಸಿದರು.ಮಂಗಳವಾರ ಬೆಂಗಳೂರು-ತುಮಕೂರು ನಡುವಿನ ರೈಲ್ವೆ ಮಾರ್ಗದ ತಪಾಸಣೆ ನಡೆಸಿದ ಅವರು, ಈ ಮಾರ್ಗದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದರು.
₹367 ಕೋಟಿ ವೆಚ್ಚದಲ್ಲಿ ಮರುನಿರ್ಮಾಣ ಆಗುತ್ತಿರುವ ಯಶವಂತಪುರ ರೈಲ್ವೆ ನಿಲ್ದಾಣ ಪರಿಶೀಲಿಸಿದ ಅವರು, ಜಾಗತಿಕ ಮಟ್ಟದ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಕಲ್ಪಿಸಲು ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ನಿಡವಂದದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ನೈಋತ್ಯ ರೈಲ್ವೆಯ ಸರಕು ಸಾಗಣೆ ದಾಸ್ತಾನು ಕೇಂದ್ರವನ್ನು ತಪಾಸಣೆ ನಡೆಸಿದರು. ಇದು ಬೆಂಗಳೂರು ವಿಭಾಗದ ಪ್ರಮುಖ ಗೂಡ್‌ಶೆಡ್ ಆಗಲಿದ್ದು, ಮುಖ್ಯವಾಗಿ ಆಟೋಮೊಬೈಲ್ ಸರಕು ಸಾಗಣೆಯ ಪ್ರಮುಖ ಕೇಂದ್ರವಾಗಲಿದೆ. ಹೀಗಾಗಿ ಆದಷ್ಟು ಬೇಗ ಕೆಲಸವನ್ನು ಮುಗಿಸುವಂತೆ ಅವರು ತಿಳಿಸಿದರು.ನಂತರ ತುಮಕೂರು ರೈಲ್ವೆ ನಿಲ್ದಾಣದ ತಪಾಸಣೆ ನಡೆಸಿದ ಅವರು, ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಅಡಿ ₹88 ಕೋಟಿ ವೆಚ್ಚದಲ್ಲಿ ಈ ನಿಲ್ದಾಣದ ಪ್ರಸ್ತಾಪಿತ ಮರು ಅಭಿವೃದ್ಧಿ ಯೋಜನೆ ವಿವರವನ್ನು ಪಡೆದರು. ಜತೆಗೆ ಪ್ರಯಾಣಿಕರಿಗೆ ಅಗತ್ಯ ಸೌಕರ್ಯ ಒದಗಿಸುವಲ್ಲಿ ಕೆಲ ಯೋಜನೆ ಸೇರ್ಪಡೆ ಮಾಡುವಂತೆ ಅವರು ಸೂಚಿಸಿದರು.
ನೈಋತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ ) ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಆಶುತೋಷ್ ಕುಮಾರ್ ಸಿಂಗ್ ಸೇರಿ ಇತರರಿದ್ದರು.