ದೇಶದ ಆರ್ಥಿಕತೆಗೆ ರೈಲ್ವೆ ಬೆನ್ನುಲುಬು

| Published : Mar 13 2024, 02:05 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ದಿನ 85 ಸಾವಿರ ಕೋಟಿ ವೆಚ್ಚದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ 10 ವಂದೇ ಭಾರತ್ ನೂತನ ರೈಲುಗಳಿಗೆ ಚಾಲನೆ ನೀಡಿದ್ದಾರೆ.

ಹುಬ್ಬಳ್ಳಿ:

ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಕಲ್ಪನೆಯನ್ನಿಟ್ಟುಕೊಂಡು ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ರಾಜ್ಯಪಾಲ ಥಾವರಚಂದ ಗೆಹಲೋತ್‌ ಹೇಳಿದರು.

ಅವರು ಮಂಗಳವಾರ ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ ₹ 5142 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರೈಲು ನಿಲ್ದಾಣದಲ್ಲಿ ಆರಂಭಿಸಿದ ಜನೌಷಧಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ದಿನ ₹ 85 ಸಾವಿರ ಕೋಟಿ ವೆಚ್ಚದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ 10 ವಂದೇ ಭಾರತ್ ನೂತನ ರೈಲುಗಳಿಗೆ ಚಾಲನೆ ನೀಡಿದ್ದಾರೆ. ದೇಶದ ನಿರಂತರ ಅಭಿವೃದ್ಧಿಯಲ್ಲಿ, ಸುಗಮ ಮತ್ತು ಸಮನ್ವಯ ರೈಲ್ವೆಗಳು ಸಾರಿಗೆ ವ್ಯವಸ್ಥೆಯು ಪ್ರಮುಖ ಕೊಡುಗೆಯನ್ನು ಹೊಂದಿದೆ. ದೇಶದಲ್ಲಿ ಭಾರತೀಯ ರೈಲ್ವೆ ಮುಖ್ಯ ಸಾರಿಗೆ ವಿಧಾನವಾಗಿದೆ. ಇದು ದೇಶದ ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಯ ಬೆನ್ನೆಲುಬಾಗಿದೆ ಎಂದರು.

ಮತ್ತೆರಡು ವಂದೇ ಭಾರತ ರೈಲು:

ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ಹೊಸ ರೈಲು ಮಾರ್ಗ, ಗತಿಶಕ್ತಿ ಮಲ್ಟಿ ಕಾರ್ಗೋ ಟರ್ಮಿನಲ್, ಗೂಡ್ಸ್ ಶೆಡ್, ಒಂದು ನಿಲ್ದಾಣ ಒಂದು ಉತ್ಪನ್ನ ಸ್ಟಾಲ್ ಮತ್ತು ಜನೌಷಧಿ ಕೇಂದ್ರವನ್ನು ದೇಶವಾಸಿಗಳಿಗೆ ಸಮರ್ಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 4 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಮಂಗಳವಾರದಂದು ರಾಜ್ಯಕ್ಕೆ ಮತ್ತೆರಡು ವಂದೇ ಭಾರತ್‌ ರೈಲುಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿರುವುದು ಪ್ರಶಂಸನೀಯ ಎಂದು ರಾಜ್ಯಪಾಲರು ಹೇಳಿದರು.ಡೆಮು, ಮೆಮು ಶೆಡ್‌ ನಿರ್ಮಾಣ:

ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ. ಎಲ್ಲ ಪ್ರಮುಖ ಮಾರ್ಗಗಳ ಡಬ್ಲಿಂಗ್ ಮತ್ತು ವಿದ್ಯುದೀಕರಣ ಪೂರ್ಣಗೊಂಡಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ₹ 5142 ಕೋಟಿ ಯೋಜನೆಗಳಿಗೆ ಪ್ರಧಾನಿಗಳು ಚಾಲನೆ ನೀಡಿದ್ದಾರೆ. ₹ 297 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ, ತನ್ನಿಸಂದ್ರ ರೈಲ್ವೆ ವರ್ಕ್‌ಶಾಪ್‌ನಲ್ಲಿ ವಂದೇ ಭಾರತ ರೈಲು ಕೋಚ್‌ಗಳ ನಿರ್ವಹಣೆಗಾಗಿ ಡೆಮು, ಮೆಮು ಶೆಡ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ರೈಲ್ವೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ರೈಲ್ವೆ ಸಚಿವರು, ರೈಲ್ವೆ ರಾಜ್ಯ ಸಚಿವರು ಮತ್ತು ಎಲ್ಲ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.ದೇಶದ ಜನರಿಗೆ ನಮ್ಮದಿ:

ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಸಣ್ಣ ಸಣ್ಣ ಹಳ್ಳಿಗಳ ಜನರೂ ರೈಲಿನಲ್ಲಿ ಸಂಚರಿಸುವಂತೆ ಸೌಲಭ್ಯ‌ ಕಲ್ಪಿಸಿದ್ದಾರೆ. ಗುಣಮಟ್ಟದ ರೈಲು ನಿರ್ಮಾಣ ಮಾಡುವ ಮೂಲಕ‌ ಜನರಿಗೆ ಬೇಕಾದ ನೆಮ್ಮದಿ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ದೇಶ ಪ್ರಗತಿ ಹೊಂದಲು ನಾಯಕನಾದವನು ಉತ್ತಮನಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಪ್ರಗತಿಯ‌ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ ಎಂದರು.ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ:

ಶಾಸಕ‌ ಮಹೇಶ ಟೆಂಗಿನಕಾಯಿ‌ ಮಾತನಾಡಿ, 2014ರ ಪೂರ್ವದಲ್ಲಿ ಪ್ರಯಾಣಿಕರು ರೈಲು‌ ನಿಲ್ದಾಣಕ್ಕೆ ಬರಲು ಹಿಂಜರಿಯುತ್ತಿದ್ದರು. ಅಷ್ಟರ ಮಟ್ಟಿಗೆ ಇಲ್ಲಿನ ಸೌಲಭ್ಯಗಳುದ್ದವು. ಆದರೆ, ಮೋದಿ ಪ್ರಧಾನಿಯಾದ ನಂತರ ಇದರ ಚಿತ್ರಣವನ್ನೇ ಬದಲಿಸಿದ್ದಾರೆ. ವಿಮಾನ ನಿಲ್ದಾಣಗಳ‌ ಮಾದರಿಯಲ್ಲಿ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ‌ಮಾಡಲಾಗಿದೆ. ಒಂದು‌ ನಿಲ್ದಾಣ ಒಂದು‌ ಉತ್ಪನ್ನ ಶೀರ್ಷಿಕೆಯ ಅಡಿ ಸ್ಥಳೀಯ‌ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮತ್ತು ರೈಲ್ವೆಗೆ ಹೆಚ್ಚುವರಿ ಆದಾಯವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ‌ ಎಂದು ಹೇಳಿದರು.

ದೇಶದ ನಗರ ರೈಲುಗಳ‌ ಅಭಿವೃದ್ಧಿಯೊಂದಿಗೆ‌ ಸಣ್ಣ ರೈಲು ನಿಲ್ದಾಣಗಳ‌ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೈಲು‌ ನಿಲ್ದಾಣಗಳಲ್ಲೂ ವಂದೇ ಭಾರತ್ ರೈಲು ಸಂಚರಿಸುವ ಗುರಿ ಹೊಂದಲಾಗಿದೆ. ಉತ್ತಮ ನಾಯಕನಿದ್ದರೆ ದೇಶವನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಮೋದಿ ಉತ್ತಮ ನಿದರ್ಶನ ಎಂದರು.

ಶಾಸಕ ಎಂ.ಆರ್‌. ಪಾಟೀಲ, ಪಾಲಿಕೆ ಮೇಯರ್‌ ವೀಣಾ ಬರದ್ವಾಡ, ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಅರವಿಂದ್ ಶ್ರೀವಾಸ್ತವ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷಾ ಖರೆ, ಅಧಿಕಾರಿಗಳಾದ ಕೆ.ಎಸ್‌. ಜೈನ್ ಸೇರಿದಂತೆ ಹಲವರಿದ್ದರು.