ಅಳ್ನಾವರ:
ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ರೈಲಿನ ಕೊಡುಗೆ ಅಪಾರ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.ಅಳ್ನಾವರದಲ್ಲಿ ₹ 17.20 ಕೋಟಿ ವೆಚ್ಚದಲ್ಲಿ ಅಮೃತ್ ಸ್ಟೇಷನ್ ಯೋಜನೆಯಡಿ ನವೀಕರಣಗೊಂಡ ಇಲ್ಲಿನ ರೈಲು ನಿಲ್ದಾಣದ ಉದ್ಘಾಟನೆ ನೆರವೇರಿಸಿದ ಅವರು, ಅಮೃತ್ ಭಾರತ್ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆಯಡಿ ದೇಶದಾದ್ಯಂತ 75 ರೈಲು ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ರಾಜ್ಯದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳಿವೆ. ಅತ್ಯಾಧುನಿಕ ಸೌಲಭ್ಯಗಳನ್ನು ಈ ರೈಲು ನಿಲ್ದಾಣಗಳು ಹೊಂದಿವೆ. ಹೈಡ್ರೋಜನ್ ರೈಲಿಗೆ ಚಾಲನೆ ನೀಡಲಾಗಿದ್ದು, ಭಾರತ ಕೂಡ ಹೈಡ್ರೋಜನ್ ರೈಲು ಹೊಂದಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದರು.
ಅಳ್ನಾವರ ರೈಲು ನಿಲ್ದಾಣದಲ್ಲಿ ಅತ್ಯುತ್ತಮ ಸೇವೆ ಒದಗಿಸಿದ್ದು ರೈಲ್ವೆ ವಿದ್ಯುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೇ ರೈಲುಗಳಿಗೆ ಸಹ ಆಧುನಿಕ ಸ್ಪರ್ಶ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆ ಇಟ್ಟಿದ್ದು ರಾಜ್ಯದ ಜನರ ಏಳಿಗೆಗೆ ರೈಲ್ವೆ ಸೇವೆ ಪೂರಕವಾಗಿದೆ ಎಂದ ಅವರು, ಸಶಕ್ತ, ಸಮೃದ್ಧ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಅಳ್ನಾವರ ಸೇರಿ ರಾಜ್ಯದ ನಾಲ್ಕು ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ನವೀಕೃತಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಲಿಫ್ಟ್, ಪಾದಚಾರಿ ಮೇಲ್ಸೇತುವೆ, ದಿವ್ಯಾಂಗ ಸ್ನೇಹಿ ಸೌಲಭ್ಯ ಸೇರಿದಂತೆ ಇತರೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಎಲ್ಲೆಡೆ ಕೆಳ ಮತ್ತು ಮೇಲ್ಸೇತುವೆ ಅಭಿವೃದ್ಧಿಪಡಿಸುತ್ತಿದ್ದು ರೈಲ್ವೆ ಹಳಿಯ ದಡದಲ್ಲಿ ಸೇತುವೆ ನಿರ್ಮಿಸಲು ಭೂ ಸ್ವಾಧೀನ ಮಾಡಿಕೊಡಬೇಕಿದೆ ಎಂದ ಜೋಶಿ, ಈ ಜಗತ್ತಿನಲ್ಲಿ ರೈಲ್ವೆ ಲೇನ್‌ನಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ. ಭಾರತ ಹಸಿರು ಹೈಡ್ರೋಜನ್ ಉತ್ಪಾದನೆಯ ಹಬ್ ಆಗಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ವರ್ಚುವಲ್ ಆಗಿ ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಶಿಲಾನ್ಯಾಸ ಉದ್ಘಾಟಿಸಿದರು. ಇದೇ ವೇಳೆ ಚಿತ್ರಕಲೆ, ಪ್ರಬಂಧ, ಆಶು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ಸ್ನೇಹಲ್ ಆರ್, ನೈಋತ್ಯ ರೈಲ್ವೆಯ ಮಹಾ ಪ್ರಬಂಧಕ ಬಿ. ಅನಂತ್, ಟಿ.ವಿ. ಭೂಷನ್ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು. ಶಿವಾನಂದ ಈಶ್ವರಗೋಳ ನಿರೂಪಿಸಿದರು.