ಚಿತ್ರದುರ್ಗದಾದ್ಯಂತ ಮಳೆ ಆರ್ಭಟ; ವಿವಿ ಸಾಗರ ಜಲಾಶಯಕ್ಕೆ ಒಂದು ಟಿಎಂಸಿ ನೀರು

| Published : May 22 2024, 12:50 AM IST

ಚಿತ್ರದುರ್ಗದಾದ್ಯಂತ ಮಳೆ ಆರ್ಭಟ; ವಿವಿ ಸಾಗರ ಜಲಾಶಯಕ್ಕೆ ಒಂದು ಟಿಎಂಸಿ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಹೊಸದುರ್ಗದಲ್ಲಿ ಹೆದ್ದಾರಿಯೇ ಕೊಚ್ಚಿ ಹೋಗಿದೆ. ಇನ್ನು, ಚಳ್ಳಕೆರೆಯಲ್ಲಿ ಸಿಡಿಲೆರಗಿ ಕಾರ್ಮಿಕ ಮಹಿಳೆಯೊಬ್ಬ ಸಾವನ್ನಪ್ಪಿದ್ದು, ಅಲ್ಲಿ ಮನೆ ಹಾನಿ ಹಾಗೂ ಫಸಲಿಗೂ ಸಂಚಕಾರ ತಂದಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಕೆರೆಕಟ್ಟೆಗಳು ಭರ್ತಿಯಾಗಿವೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಬಳಿ ವೇದಾವತಿ ತುಂಬಿ ಹರಿಯುತ್ತಿದ್ದಾಳೆ. ವಿವಿ ಸಾಗರ ಜಲಾಶಯಕ್ಕೆ ಎರಡೇ ದಿನದಲ್ಲಿ ಒಂದು ಟಿಎಂಸಿಯಷ್ಟು ನೀರ ಹರಿದು ಬಂದಿದೆ. ಹಿರಿಯೂರು ತಾಲೂಕಿನಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಬಳಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾಳೆ.

ಹೊಸದುರ್ಗ ತಾಲೂಕಿನ ನೀರಗುಂದ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತದ ಭೀತಿಗೆ ಒಳಗಾಗಿದೆ. ತರಿಕೆರೆ, ಹೊಸದುರ್ಗ ಮಾರ್ಗ ಮದ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 173ರ ಮೇಲೆ ನೀರು ರಭಸವಾಗಿ ಹರಿದಿದ್ದರಿಂದ ರಸ್ತೆ ಬದಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ರಸ್ತೆ ಕುಸಿತದ ಸ್ಥಳದಲ್ಲಿ ಸಾರ್ವಜನಿಕರು ಅಡ್ಡಲಾಗಿ ಕಲ್ಲು ಇಟ್ಟಿದ್ದಾರೆ.

ಚಿತ್ರದುರ್ಗ ಹೊರವಲಯದಲ್ಲಿರುವ ತಿಮ್ಮಣ್ಣನ ನಾಯಕನ ಕೆರೆ ಏರಿಯ ಅಲ್ಲಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಕೆರೆ ಏರಿ ಮೇಲ್ಬಾಗ ವಾಕಿಂಗ್ ಸ್ಪಾಟ್ ಮಾಡಲಾಗಿದ್ದು ಇದರ ಪಕ್ಕದಲ್ಲಿಯೇ ಮಣ್ಣು ಕೊಚ್ಚಿಕೊಂಡು ಹೋಗಿದೆ. ವಾಕರ ರಸ್ತ ನಿರ್ಮಿಸುವಾಗ ತಡೆಗೋಡೆ ನಿರ್ಮಿಸದ ಕಾರಣ ಮಣ್ಣು ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸೂಗೂರಿನಲ್ಲಿ 108.6 ಮಿಮೀ ಮಳೆ:

ಸೋಮವಾರ ರಾತ್ರಿ ಸುರಿದ ಮಳೆಗೆ ಹಿರಿಯೂರು ತಾಲೂಕಿನ ಸೂಗೂರಿನಲ್ಲಿ 108.6 ಮಿಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣವಾಗಿದೆ. ಹಿರಿಯೂರಿನಲ್ಲಿ 54.4 ಮಿಮೀ, ಇಕ್ಕನೂರಿನಲ್ಲಿ 68.4, ಈಶ್ವರಗೆರೆಯಲ್ಲಿ 51, ಬಬ್ಬೂರಿನಲ್ಲಿ 59.2 ಮಳೆಯಾಗಿದೆ. ಚಿತ್ರದುರ್ಗದಲ್ಲಿ 45.8 ಮಿ.ಮೀ, ಭರಮಸಾಗರದಲ್ಲಿ 38.4, ಹಿರೇಗುಂಟನೂರಿನಲ್ಲಿ 13.4, ತುರುವನೂರಿನಲ್ಲಿ 28.6, ಸಿರಿಗೆರೆ 28.8 ಹಾಗೂ ಐನಳ್ಳಿಯಲ್ಲಿ 36.2 ಮಿಮೀ ಮಳೆಯಾಗಿದೆ. ಹೊಸದುರ್ಗದಲ್ಲಿ 72.6 ಮಿಮೀ, ಬಾಗೂರು 55.5, ಮಾಡದಕೆರೆ 62 , ಮತ್ತೋಡಿನಲ್ಲಿ 13.2 ಹಾಗೂ ಶ್ರೀರಾಂಪುರದಲ್ಲಿ 45.2 ಮಿಮೀ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 30.6 ಮಿಮೀ, ರಾಮಗಿರಿ 31.5, ಚಿಕ್ಕಜಾಜೂರು 30.5, ಬಿ.ದುರ್ಗ 29.2, ಹೆಚ್.ಡಿ.ಪುರ 38.6 ಮಿಮೀ ಮಳೆಯಾಗಿದೆ. ಚಳ್ಳಕೆರೆಯಲ್ಲಿ 44 ಮಿ.ಮೀ, ಪರಶುರಾಂಪುರ 46.2, ನಾಯಕನಹಟ್ಟಿ 50.4, ತಳಕು 31.2 ಹಾಗೂ ಡಿ.ಮರಿಕುಂಟೆಯಲ್ಲಿ 35.4ಮಿ.ಮೀ ಮಳೆಯಾಗಿದೆ.ಮನೆ ಹಾನಿ, ಬೆಳೆ ನಾಶ: ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 34 ಮನೆಗಳು ಭಾಗಶಃ ಹಾನಿಯಾಗಿದ್ದು, 1 ದೊಡ್ಡ ಜಾನುವಾರು, 2 ಸಣ್ಣ ಜಾನುವಾರು ಸಾವಿ ಗೀಡಾಗಿವೆ. ಸಿಡಿಲಿಗೆ ಓರ್ವ ಮಹಿಳೆ ಅಸು ನೀಗಿದ್ದಾಳೆ. ಜಿಲ್ಲೆಯಾದ್ಯಂತ ಒಟ್ಟು 11.48 ಹೆಕ್ಟೇರ್ ತೋಟಗಾರಿಕೆ ಬೆಳೆನಾಶ ಮತ್ತು ಮೂರು ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.ಸಿಡಿಲೆರಗಿ ಕಾರ್ಮಿಕ ಮಹಿಳೆ ಸಾವು!: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಕೆರೆಯಂಗಳದಲ್ಲಿ ಮಹಾರಾಷ್ಟ್ರ ಮೂಲದ ಕುಟುಂಬವೊಂದು ನೆಲೆಸಿದ್ದು, ಪ್ರತಿದಿನ ಅವರು ಈ ಭಾಗದಲ್ಲಿ ಕಟ್ಟಿಗೆ ಸೇರಿಸಿ ಇದ್ದಿಲ್ಲನ್ನು ಸುಟ್ಟು ವ್ಯಾಪಾರ ಮಾಡುತ್ತಿದ್ದರು. ಸೋಮವಾರ ತಡರಾತ್ರಿ ಬಡಿದ ಸಿಡಿಲಿಗೆ ಕೂಲಿಕಾರ್ಮಿಕ ಮಹಿಳೆ ಲಕ್ಷ್ಮೀ (೬೦) ಸಾವನಪ್ಪಿದ್ದಾಳೆ.

ಕಳೆದ ಕೆಲವು ತಿಂಗಳುಗಳಿಂದ ಇವರು ಮಹಾರಾಷ್ಟ್ರದಿಂದ ಈ ಭಾಗಕ್ಕೆ ಕೂಲಿ ಕೆಲಸಕ್ಕೆ ಆಗಮಿಸಿದ್ದು, ಕೆರೆಯಂಗಳದಲ್ಲಿ ಪುಟ್ಟ ಶೆಡ್ ಹಾಕಿಕೊಂಡು ಕಟ್ಟಿಗೆಸುಟ್ಟು ಇದ್ದಿಲು ಮಾಡುತ್ತಿದ್ದರು. ಮಳೆ ಬಂದ ಸಂದರ್ಭದಲ್ಲಿ ನೀರು ಶೆಡ್‌ಗೆ ನುಗ್ಗದಂತೆ ಲಕ್ಷ್ಮೀ ನೀರು ಎತ್ತಿ ಹೊರಹಾಕಲು ಬಂದ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ. ಮೃತ ಮಹಿಳೆ ಮಹಾರಾಷ್ಟ್ರ ರಾಜ್ಯದ ರಾಯಗಡ ಜಿಲ್ಲೆಯ ರೋಹಾ ತಾಲ್ಲೂಕಿನ ಮಾಡೋಶಿಪ್ ಗ್ರಾಮದವರು ಎಂದು ತಿಳಿದು ಬಂದಿದೆ. ಹಿರಿಯೂರಲ್ಲಿ 54.4 ಮಿ.ಮೀ. ಮಳೆ ದಾಖಲು

ಹಿರಿಯೂರು: ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸೋಮವಾರವೂ ಸಹ ಸಂಜೆಯಿಂದಲೇ ಶುರುವಾದ ಮಳೆಯು ಸರಿ ರಾತ್ರಿಯವರೆಗೂ ಸುರಿಯಿತು.

ಸೋಮವಾರ ಸುರಿದ ಮಳೆ ವರದಿಯಂತೆ ತಾಲೂಕಿನಲ್ಲಿ ಸುಮಾರು 5 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಸುಮಾರು 18 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಬಾಳೆ ಬೆಳೆ ನಾಶವಾಗಿದೆ. ಧರ್ಮಪುರ ಹೋಬಳಿಯ ಹೊಂಬಳದಹಟ್ಟಿ ಗ್ರಾಮದ ಲಕ್ಷ್ಮೀದೇವಿ ನಿಜಲಿಂಗಪ್ಪನವರ ಮನೆ, ಅರಳಿಕೆರೆಯ ಸಣ್ಣ ಕರಿಯಪ್ಪನವರ ಮನೆ, ಪಿ.ಡಿ.ಕೋಟೆಯ ಕಮಲಮ್ಮ ಯಲ್ಲಪ್ಪನವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜೆ.ಜೆ.ಹಳ್ಳಿ ಹೋಬಳಿಯ ದಿಂಡಾವರ ಹೊಸೂರಿನ ತಿಮ್ಮಯ್ಯನವರ ಮನೆ ಹಾಗೂ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ದೊಡ್ಡಲಿಂಗಪ್ಪನವರ ಮನೆಯು ಮಳೆಗೆ ಹಾನಿಯಾಗಿದೆ.

ಇನ್ನು, ಕಸಬಾ ಹೋಬಳಿಯ ಭರಮಗಿರಿ ಗ್ರಾಮದ ಎಂ.ಎಸ್.ಗೌತಮ್, ಶಾಂತಮ್ಮ, ಮಂಜಮ್ಮ ಎನ್ನುವವರ ಜಮೀನಿನಲ್ಲಿದ್ದ ಬಾಳೆ ಬೆಳೆಗೆ ಹಾನಿಯಾಗಿದೆ. ಧರ್ಮಪುರ ಹೋಬಳಿಯ ಖಂಡೇನಹಳ್ಳಿ ಗ್ರಾಮದ ದಾಸಪ್ಪ, ಹನುಮಂತರಾಜು, ರಾಮಕೃಷ್ಣಪ್ಪ ಹಾಗೂ ಐಮಂಗಲ ಹೋಬಳಿಯ ಸೊಂಡೆಕೆರೆ ಗ್ರಾಮದ ಬೊಮ್ಮಲಿಂಗಪ್ಪನವರ ಬಾಳೆ ಬೆಳೆ ನಾಶವಾಗಿದೆ. ಅದೃಷ್ಟವಶಾತ್ ಮಳೆಯಿಂದಾಗಿ ಯಾವುದೇ ಆಕಸ್ಮಿಕ ಮರಣ ಸಂಭವಿಸಿಲ್ಲ. ಧರ್ಮಪುರದಿಂದ ಅರಳಿಕೆರೆಗೆ ಹೋಗುವ ರಸ್ತೆ ಕುಸಿದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಹೂವಿನಹೊಳೆ ಹಳ್ಳವು ಭರ್ತಿಯಾಗಿದ್ದು, ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿದೆ.ಎಲ್ಲೆಲ್ಲಿ ಎಷ್ಟೆಷ್ಟು ಮಳೆ?: ಹಿರಿಯೂರು 54.4 ಮಿ.ಮೀ., ಬಬ್ಬೂರು 59.2 ಮಿ.ಮೀ., ಈಶ್ವರಗೆರೆ 51.0 ಮಿ.ಮೀ.,ಸೂಗೂರು 108.6 ಮಿ.ಮೀ., ಇಕ್ಕನೂರು 68.4 ಮಿ.ಮೀ. ಮಳೆ ದಾಖಲಾಗಿದ್ದು, ಸೂಗೂರಿನಲ್ಲಿ ಅತೀ ಹೆಚ್ಚಿನ ಮಳೆ ಬಿದ್ದಿದೆ.

ಚಳ್ಳಕೆರೆಯಲ್ಲಿ ಕೃತ್ತಿಕಾ ಮಳೆಯ ಅಟ್ಟಹಾಸ

ಚಳ್ಳಕೆರೆ: ಮತ್ತೊಮ್ಮೆ ತಾಲ್ಲೂಕಿನಾದ್ಯಂತ ಕೃತ್ತಿಕಾ ಮಳೆ ಅತ್ಯುತ್ತಮವಾಗಿ ಎಲ್ಲೆಡೆ ಸುರಿದಿದ್ದು, ಚಳ್ಳಕೆರೆ ತಾಲ್ಲೂಕು ಈಗ ಮಳೆಯ ತಾಲ್ಲೂಕಾಗಿ ಪರಿವರ್ತನೆಯಾದಂತಾಗಿದೆ.

ಸೋಮವಾರ ರಾತ್ರಿ ಸುರಿದ ಮಳೆಯ ಪ್ರಮಾಣ ಚಳ್ಳಕೆರೆ-೪೪, ಪರಶುರಾಮಪುರ-೪೨.೦೨, ನಾಯಕನಹಟ್ಟಿ-೫೦.೦೪, ತಳಕು-೩೧.೦೨, ದೇವರಮರಿಕುಂಟೆ-೩೫.೦೪ ಒಟ್ಟು ೨೧೨.೦೨ ಎಂ.ಎಂ. ಮಳೆಯಾಗಿದ್ದು, ಈವರೆಗೂ ಹಿಂದಿನ ಮಳೆ ಪ್ರಮಾಣ ೩೪೮.೦೨ ಸೇರಿ ಒಟ್ಟು ೫೫೦.೧೭ ಎಂ.ಎಂ ಮಳೆಯಾಗಿದೆ.ಪ್ರಸ್ತುತ ಕಳೆದ ಸುಮಾರು ಎಂಟ್ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಮೀನುಗಳಲ್ಲಿದ್ದ ಬೆಳೆಗಳಿಗೆ ಭಾರಿ ಪ್ರಮಾಣ ಹಾನಿಯಾಗಿದೆ. ಅದೇ ರೀತಿ ಅನೇಕ ಮನೆಗಳು ಮಳೆಗೆ ನೆಲಕ್ಕುರುಳಿವೆ. ಬಹಳ ದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ ಮಳೆ ತಡವಾಗಿ ಆಗಮಿಸಿದರೂ ಅವಾಂತರ ಜೊತೆಗೆ ಭಯವನ್ನು ಹುಟ್ಟುಹಾಕಿದೆ.

ಸೋಮವಾರ ಬಿದ್ದ ಮಳೆಗೆ ಬುಡ್ನಹಟ್ಟಿ ಗ್ರಾಮದ ಕೆ.ಗಂಗಮ್ಮ ಎಂಬುವವರ ವಾಸದ ಮನೆ ಬಿದ್ದು ಸುಮಾರು ೫೦ ಸಾವಿರ ನಷ್ಟವಾಗಿದೆ, ಕೋಡಿಹಳ್ಳಿ ಗ್ರಾಮದ ಗಂಗಮ್ಮ ಎಂಬುವವರ ವಾಸದ ಮನೆಗೆ ಬಿದ್ದು ೪೦ ಸಾವಿರ ನಷ್ಟವಾಗಿದೆ. ಮಲ್ಲೂರಹಟ್ಟಿ ಗ್ರಾಮದ ತಿಪ್ಪಕ್ಕ ಎಂಬುವವರ ಮನೆ ಕುಸಿದು ಬಿದ್ದು ೫೦ ಸಾವಿರ ನಷ್ಟ ಸಂಭವಿಸಿದೆ. ಅದೇ ಗ್ರಾಮದ ಶಂಕ್ರಮ್ಮ, ಸಣ್ಣಕ್ಕ ಎಂಬುವವರ ಮನೆಗಳು ಬಿದ್ದು ತಲಾ ೩೦ ಸಾವಿರ ನಷ್ಟ ಸಂಭವಿಸಿದೆ. ತಾಲ್ಲೂಕಿನ ಪರಶುರಾಮಪುರ ಹೋಬಳಿ ಚನ್ನಮ್ಮ ನಾಗತಿಹಳ್ಳಿ ಗ್ರಾಮದ ರಿ.ಸರ್ವೆ ನಂ.೭೪/೫ ೨.೨ ಎಕರೆ ಪ್ರದೇಶದಲ್ಲಿದ್ದ ಮಾರಣ್ಣ ಎಂಬುವವರಿಗೆ ಸೇರಿದ ಬಾಳೆತೋಟ ಗಾಳಿ, ಮಳೆಗೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.ಕಳೆದ ಹಲವಾರು ತಿಂಗಳಿನಿಂದ ಬೇಸಿಗೆಯ ರಣಬಿಸಿಲಿಗೆ ಬತ್ತಿ ಬಾಡಿದ್ದ ವೇದಾವತಿ ನದಿ ಈಗ ನಿರಂತರ ಮಳೆ ಹಿನ್ನೆಲೆಯಲ್ಲಿ ಮೈದುಂಬಿ ಹರಿಯುತ್ತಿದ್ದಾಳೆ. ನದಿಯಲ್ಲಿ ಹರಿಯುವ ನೀರು ನೋಡಲು ಸುತ್ತಮುತ್ತಲ ಜನ ಆಗಮಿಸಿ ಸಂತಸ ವ್ಯಕ್ತಪಡಿಸುತ್ತಿ ದ್ದಾರೆ. ತಾಲ್ಲೂಕಿನ ಕೋನಿಗರಹಳ್ಳಿ, ನಾರಾಯಣಪುರ ಬ್ಯಾರೇಜ್ ಬಳಿ ವೇದಾವತಿ ನದಿ ನೀರು ತುಂಬು ರಭಸದಿಂದ ಹರಿಯುತ್ತಿದೆ.

ಭಾರೀ ಮಳೆಗೆ ಹೊಸದುರ್ಗದಲ್ಲಿ ಹೆದ್ದಾರಿ ಕುಸಿಯುವ ಭೀತಿ!

ಹೊಸದುರ್ಗ: ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವು ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು ರಸ್ತೆ ಸೇರಿದಂತೆ ಹಲವು ಮನೆಗಳು ಹಾಗೂ ಬೆಳೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಸೋಮವಾರ ರಾತ್ರಿ ಸುರಿದ ಮಳೆಗೆ ಹೊಸದುರ್ಗ- ಅಜ್ಜಂಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರಗುಂದ ಗೇಟ್‌ ಹಾಗೂ ಹುರುಳಿಹಳ್ಳಿ ನಡುವೆ ರಸ್ತೆ ಮೇಲೆ ನೀರು ಹರಿದಿದ್ದು ಇದರಿಂದ ರಸ್ತೆ ಬದಿಯ ಮಣ್ಣು ಕೊಚ್ಚಿ ಹೋದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀತಿ ಉಂಟಾಗಿದೆ. ಬಿದ್ದಿದೆ. ಇದರಿಂದ ಕೆಲಕಾಲ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅಪಾಯ ತಂದೊಡ್ಡುವ ಆತಂಕ ಸೃಷ್ಠಿಯಾಗಿತ್ತು. ಇದನ್ನು ಗಮನಿಸಿದ ಈ ಬಾಗದ ನಾಗರೀಕರು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸರಿಪಡಿಸಿದ್ದಾರೆ.ಅಲ್ಲದೆ, ಕಸಬಾ ಹೋಬಳಿಯ ಮಧುರೆ, ಯಾಲಕಪ್ಪನಹಟ್ಟಿ, ಚಿನ್ನಾಪುರ, ಬೋಕಿಕೆರೆ, ಅಡವಿ ಸಂಗೇನಹಳ್ಳಿ, ಹೊನ್ನೆಕೆರೆ, ಮಾಡದಕೆರೆ ಹೋಬಳಿಯ ಡಿ.ಮಲ್ಲಾಪುರ, ಅತ್ತಿಮಗ್ಗೆ, ಬಂಟನಗವಿ, ಬೇವಿನಹಳ್ಳಿ ಗ್ರಾಮಗಳಲ್ಲಿ ಹಾಗೂ ಶ್ರೀರಾಂಪುರ ಹೋಬಳಿಯ ಸಿಂಗೇನಹಳ್ಳಿ, ಕೆರೆಹೋಸಹಳ್ಳಿ ಗ್ರಾಮಗಳಲ್ಲಿ ಹಲವಾರು ಮನೆಗಳು ಬಿದ್ದಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಮಾಡದಕೆರೆ ಹೋಬಳಿಯ ತೊಡರನಾಳು ಕೆರೆ ಸೋಮವಾರ ರಾತ್ರಿ ಸುರಿದ ಮಳೆಗೆ ತುಂಬಿ ಕೋಡಿ ಬಿದ್ದಿದೆ. ಅಲ್ಲದೆ ವೇದಾವತಿ ನದಿ ಪಾತ್ರದಲ್ಲಿಯೂ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ನದಿಯ ಹರಿವಿನ ಪ್ರಮಾಣ ಹೆಚ್ಚಾಗಿದ್ದು ನದಿ ನೀರು ವಾಣಿ ವಿಲಾಸ ಜಲಾಶಯ ಸೇರುತ್ತಿದೆ.ಮಳೆ ವಿವರ: ಹೊಸದುರ್ಗ- ನ72.6 ಮಿ.ಮೀ., ಬಾಗೂರು-55.5.ಮಿ.ಮೀ., ಮಾಡದಕೆರೆ- 62 ಮಿ.ಮೀ., ಮತ್ತೋಡು- 13.2 ಮಿ.ಮೀ., ಶ್ರೀರಾಂಪುರ - 45.2 ಮಿ.ಮೀ. ಮಳೆಯಾಗಿದೆ. 21 ಎಚ್‌ಎಸ್‌ಡಿ1: ಹೊಸದುರ್ಗ - ಅಜ್ಜಂಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹರಿದ ಪರಿಣಾಮ ರಸ್ತೆ ಬದಿಯಲ್ಲಿ ಮಣ್ಣು ಕೊಚ್ಚಿ ಹೋಗಿ ಹೆದ್ದಾರಿ ಕುಸಿಯುವ ಭೀತಿ ಉಂಟಾಗಿರುವುದು.