ಮುಂಡಾಜೆ, ಚಾರ್ಮಾಡಿ ಸುತ್ತಮುತ್ತ ಮಳೆ, ತುಂಬಿ ಹರಿದ ಮೃತ್ಯುಂಜಯ ನದಿ

| Published : May 16 2024, 12:53 AM IST

ಮುಂಡಾಜೆ, ಚಾರ್ಮಾಡಿ ಸುತ್ತಮುತ್ತ ಮಳೆ, ತುಂಬಿ ಹರಿದ ಮೃತ್ಯುಂಜಯ ನದಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡಾಜೆ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗೆದು ಹಾಕಲಾದ ಸ್ಥಳಗಳಲ್ಲಿ ಕೆಸರು ಮತ್ತು ಜಾರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಕೆಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆದ ಘಟನೆಯೂ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮುಂಡಾಜೆ, ಚಾರ್ಮಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬುಧವಾರ ಮುಂಜಾನೆ ಉತ್ತಮ ಮಳೆ ಸುರಿಯಿತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 6.30 ರವರೆಗೆ ಮುಂದುವರಿಯಿತು.

ಮುಂಡಾಜೆ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗೆದು ಹಾಕಲಾದ ಸ್ಥಳಗಳಲ್ಲಿ ಕೆಸರು ಮತ್ತು ಜಾರುವ ಕಾರಣ ವಾಹನ ಸವಾರರು ಪರದಾಡುವಂತಾಯಿತು. ಕೆಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆದ ಘಟನೆಯೂ ನಡೆಯಿತು.

ಉಜಿರೆಯ ಸುಮಾರು ಒಂದು ಕಿ.ಮೀ. ಪ್ರದೇಶದಲ್ಲಿ ಮಾತ್ರ ಡಾಮರೀಕರಣವಾಗಿದೆ. ಉಳಿದ ಸ್ಥಳಗಳಲ್ಲಿ ಜಲ್ಲಿ ಹಾಕುವುದು, ರಸ್ತೆಗೆಯುವುದು ಮುಂದುವರಿದಿದೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಕಾಲಿಡಲಿದೆ. ರಸ್ತೆಯ ಕೆಲಸ ಇದೇ ರೀತಿಯಲ್ಲಿ ನಿಧಾನವಾಗಿ ಮುಂದುವರಿದರೆ ಅಗೆದು ಹಾಕಲಾಗಿರುವ ಸ್ಥಳಗಳಲ್ಲಿ ಡಾಮರೀಕರಣ ನಡೆಸುವುದು ಅಸಾಧ್ಯ. ಚರಂಡಿಗಳನ್ನೆಲ್ಲ ಕಾಮಗಾರಿಗಾಗಿ ಮುಚ್ಚಲಾಗಿದ್ದು, ಪ್ರಸ್ತುತ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮಳೆ ನೀರು ಇದೇ ರೀತಿ ರಸ್ತೆಯಲ್ಲಿ ಹರಿದರೆ ರಸ್ತೆಯ ಸ್ಥಿತಿ ಇನ್ನಷ್ಟು ಹದಗೆಡಲಿದೆ.ಸೋಮಂತಡ್ಕ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿಗಾಗಿ ಹೊಸದಾಗಿ ಚರಂಡಿಗಳನ್ನು ನಿರ್ಮಿಸಲಾಗಿದ್ದು ಇದರ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ.ಹಳೆ ಚರಂಡಿಗಳನ್ನು ಮುಚ್ಚಿ ಹಾಕಿ ಹೊಸ ಚರಂಡಿ ನಿರ್ಮಾಣ ಆರಂಭಿಸಲಾಗಿದೆ. ಆದರೆ ಇಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೆ ಮಳೆ ನೀರು ರಸ್ತೆಗೆ ನುಗ್ಗುತ್ತಿದ್ದು ಮಳೆ ಬಳಿಕ ರಸ್ತೆ ಬದಿ ಕೆರೆಯಂತಾಗುತ್ತಿದೆ ಇದರಿಂದ ಅಂಗಡಿಗಳಿಗೆ ತೆರಳಲು ಜನ ಸಾಹಸ ಪಡಬೇಕಾಗಿದೆ. ಸಾಮಾನ್ಯ ಮಳೆಗೆ ಈ ಸ್ಥಿತಿಯಾದರೆ ಮುಂದಿನ ದಿನಗಳಲ್ಲಿ ಜೋರಾದ ಮಳೆ ಸುರಿದಾಗ ನೀರು ಅಂಗಡಿ, ಮನೆಗಳಿಗೂ ನುಗ್ಗುವ ಸಾಧ್ಯತೆ ಇದೆ. ರಸ್ತೆ ಬದಿ ಹೆಚ್ಚಿನ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವು ಇದ್ದು ಇದರೊಂದಿಗೆ ಮಳೆ ನೀರು ಬೆರೆತು ಸೊಳ್ಳೆಗಳ ಉತ್ಪತ್ತಿ ತಾಣವಾಗಲಿದೆ.ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳನ್ನು ಯಾವ ರೀತಿ ಮುಂದಕ್ಕೆ ಕೊಂಡೊಯ್ದು ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೆ ಮಳೆಗಾಲ ಆರಂಭಕ್ಕೆ ಮೊದಲು ಪೂರ್ಣಗೊಳ್ಳುವುದು ಅನುಮಾನವಾಗಿದೆ.

ತುಂಬಿ ಹರಿದ ಮೃತ್ಯುಂಜಯ ನದಿ

ಚಾರ್ಮಾಡಿ ಘಾಟಿ ಭಾಗದಲ್ಲಿ ಮಂಗಳವಾರ ಸಂಜೆಯಿಂದಲೇ ಎಡಬಿಡದೆ ಮಳೆ ಸುರಿದಿದೆ. ಮೃತ್ಯುಂಜಯ ನದಿಯಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ನೀರಿನ ಹರಿವು ಹೆಚ್ಚಿದೆ. ಸಾಮಾನ್ಯ ಪ್ರವಾಹದಂತೆ ಹರಿದ ನೀರು ಕಿಂಡಿ ಅಣೆಕಟ್ಟುಗಳ ಮೇಲ್ಭಾಗದಲ್ಲಿ ಹರಿದು ಮಳೆಗಾಲದ ದಿನಗಳನ್ನು ನೆನಪಿಸಿತು. ಇದೀಗ ನದಿಯ ಕಿಂಡಿ ಅಣೆಕಟ್ಟುಗಳ ಹಲಗೆಗಳನ್ನು ತೆರವುಗೊಳಿಸಲು ಫಲಾನುಭವಿಗಳು ಮುಂದಾಗಿದ್ದು ನದಿ ನೀರಿನ ಇಳಿಕೆಗಾಗಿ ಕಾಯುವಂತಾಗಿದೆ. ನದಿಯಲ್ಲಿ ನೀರು ತುಂಬಿ ಹರಿದಾಗ ಸ್ವಲ್ಪಮಟ್ಟಿನ ತ್ಯಾಜ್ಯವು ಕಿಂಡಿ ಅಣೆಕಟ್ಟೆಗಳಲ್ಲಿ ಶೇಖರಣೆಯಾಗಿದೆ.