ಸಾರಾಂಶ
ಕಳೆದ ತಿಂಗಳು ತಾಲೂಕಿನ ವಿವಿಧೆಡೆ ಅವಾಂತರ ಸೃಷ್ಟಿಸಿದ್ದ ಮಳೆರಾಯ ಮತ್ತೆ ಗುರುವಾರ ಅಬ್ಬರಿಸಿದ್ದು, ಈ ಬಾರಿಯೂ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದ್ದು ರೈತ ಸಮೂಹ ಆತಂಕಕ್ಕೊಳಗಾಗಿದೆ.
ಕಾರಟಗಿ: ಕಾರಟಗಿ ಸೇರಿ ಇತರೆಡೆ ಗುರುವಾರ ಮಳೆ ಅಬ್ಬರಿಸಿದ್ದು, ಇದರಿಂದಾಗಿ ತಾಲೂಕಿನ ಹಲವೆಡೆ ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದೆ.
ಕಳೆದ ತಿಂಗಳು ತಾಲೂಕಿನ ವಿವಿಧೆಡೆ ಅವಾಂತರ ಸೃಷ್ಟಿಸಿದ್ದ ಮಳೆರಾಯ ಮತ್ತೆ ಗುರುವಾರ ಅಬ್ಬರಿಸಿದ್ದು, ಈ ಬಾರಿಯೂ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದ್ದು ರೈತ ಸಮೂಹ ಆತಂಕಕ್ಕೊಳಗಾಗಿದೆ.ಕಾರಟಗಿ ಸೇರಿದಂತೆ ತಾಲೂಕಿನ ಮರ್ಲಾನಹಳ್ಳಿ, ಸಿದ್ದಾಪುರ, ಹುಳ್ಕಿಹಾಳ, ಹಗೇದಾಳ ಕೊಟ್ನೇಕಲ್, ಬರಗೂರು, ಯರಡೋಣ, ಬೂದಗುಂಪಾ ಸೇರಿದಂತೆ ಇತರೆಡೆ ಅಪಾರ ಪ್ರಮಾಣದ ಬೆಳೆ ಕಟಾವಿಗೆ ಬಂದಿದೆ. ಕೆಲವು ಭಾಗದಲ್ಲಿ ಈಗಾಗಲೇ ಕಟಾವು ಮಾಡಲಾಗಿದೆ. ಈಗ ಕಟಾವು ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಿಂದ ಮಳೆ ಸತತವಾಗಿ ಸುರಿಯುತ್ತಿದೆ. ಮೋಡ ಕವಿದ ವಾತಾವರಣವಿದ್ದು, ಆಗಾಗ ಬಿಸಿಲು ಬೀಳುತ್ತದೆ. ತೇವಾಂಶದಿಂದ ಕೂಡಿದರೆ ಭತ್ತ ಮೊಳಕೆಯೊಡೆಯಲಿದೆ ಎನ್ನುವ ಭಯ ಅನ್ನದಾತರಲ್ಲಿ ಆವರಿಸಿದೆ.
ಬೆಳೆ ನಿರ್ವಹಣೆಗೆ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಸಿಂಪಡಣೆ, ಭತ್ತ ನಾಟಿ, ಕಳೆ ಕೀಳುವುದು ಸೇರಿ ಇತರ ಕೆಲಸಗಳಿಗೆ ರೈತರು ಸಾವಿರಾರು ರುಪಾಯಿ ವ್ಯಯಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಭತ್ತದ ಫಸಲು ಕೈಗೆ ಬಂತು ಎನ್ನುವಾಗಲೇ ಮತ್ತೆ ಬರಸಿಡಿಲಿನಂತೆ ಮಳೆ ಎರಗಿದ್ದು, ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.