ಮುಂಡಗೋಡದಲ್ಲಿ ಮಳೆ ಬಿಡುವು: ಭತ್ತ ನಾಟಿ ಚುರುಕು

| Published : Aug 04 2025, 12:30 AM IST

ಸಾರಾಂಶ

ಮಳೆ ಸ್ವಲ್ಪ ವಿರಾಮ ನೀಡಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಸಂತೋಷ ದೈವಜ್ಞ

ಮುಂಡಗೋಡ: ಮಳೆ ಸ್ವಲ್ಪ ವಿರಾಮ ನೀಡಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಎಲ್ಲೆಂದರಲ್ಲಿ ಭತ್ತದ ಗದ್ದೆಗಳಲ್ಲಿ ನೀರು ನಿಂತು ಗದ್ದೆಗಳೆಲ್ಲ ಹಸಿರುಗೊಂಡಿದೆ. ಭತ್ತ ನಾಟಿ ಕಾರ್ಯ ಕೂಡ ಭರದಿಂದ ಸಾಗಿದೆ.

ಭತ್ತ ಪ್ರಧಾನ ಪ್ರದೇಶವಾಗಿರುವ ಮುಂಡಗೋಡ ತಾಲೂಕಿನಲ್ಲಿ ಶೇ. ೬೦ರಷ್ಟು ಭೂಮಿಯಲ್ಲಿ ಭತ್ತವನ್ನೇ ಬೆಳೆಯಲಾಗುತ್ತದೆ. ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ. ತಾಲೂಕಿನಲ್ಲಿ ಸುಮಾರು ೧೫೦೦೦ ಹೆಕ್ಟೇರ್‌ ಬಿತ್ತನೆ ಪ್ರದೇಶವಿದೆ. ಅದರಲ್ಲಿ ೬೦೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಕೂರ್ಗೆ ಭತ್ತದ ಗದ್ದೆಗಳಲ್ಲಿ ನೀರು ಆವರಿಸಿದೆ. ನಾಟಿ ಭತ್ತ ಬಿತ್ತನೆ ಕೂಡ ನಡೆಯುತ್ತಿದೆ. ಸುಮಾರು ೪೦೦೦ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ, ಸುಮಾರು ೧೪೦೦ ಹೆಕ್ಟೇರ್‌ನಲ್ಲಿ ಕಬ್ಬು ನಾಟಿ ಹಾಗೂ ಸೋಯಾಬಿನ್ ಮುಂತಾದ ಬೆಳೆಗಳನ್ನು ಕೂಡ ಸ್ಪಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಭತ್ತ ನಾಟಿ ಪೂರ್ಣಗೊಂಡರೆ ಶೇ. ೧೦೦ರಷ್ಟು ಬಿತ್ತನೆಯಾದಂತಾಗಲಿದೆ.

ಭರದಿಂದ ಸಾಗಿದ ಭತ್ತದ ನಾಟಿ ಕಾರ್ಯ:

ಈ ವರೆಗೂ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ರೈತರು ಭತ್ತದ ಸಸಿ ಮಡಿಗಳನ್ನು ತಯಾರಿ ಮಾಡಿಕೊಂಡಿದೆ. ಗದ್ದೆಗಳಲ್ಲಿ ಭತ್ತದ ಸಸಿ ನೆಡುವ ಮೂಲಕ ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ೨೫೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ.

ಈಗಾಗಲೇ ಶೇ. ೮೦ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಕಾರ್ಯ ಭರದಿಂದ ಸಾಗಿದೆ. ಕೆರೆ, ಜಲಾಶಯದ ಕೆಳಭಾಗದಲ್ಲಿರುವ ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ನಾಟಿ ಕಾರ್ಯ ನಡೆಸಲಾಗುತ್ತಿದೆ. ಭತ್ತದ ಗದ್ದೆಗಳೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಭತ್ತದ ಬೆಳೆಗೆ ಪೂರಕ ವಾತಾವರಣವಿದೆ. ಗದ್ದೆಗಳಲ್ಲಿ ಕಳೆ ಪ್ರಮಾಣ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಕೂಡ ಪ್ರಕೃತಿ ರೈತನ ಕೈಹಿಡಿದರೆ ಉತ್ತಮ ಭತ್ತದ ಬೆಳೆ ನಿರೀಕ್ಷಿಸಬಹುದಾಗಿದೆ.

ಗೋವಿನಜೋಳ ಬೆಳೆ ಹಾನಿ:

ನಿರಂತರ ಮಳೆಯಿಂದಾಗಿ ಗದ್ದೆಯಲ್ಲಿ ನೀರು ಸಂಗ್ರಹವಾಗಿ ತೇವಾಂಶ ಹೆಚ್ಚಿದ ಪರಿಣಾಮ ತಡವಾಗಿ ಬಿತ್ತನೆ ಮಾಡಲಾದ ಗೋವಿನ ಜೋಳ ಬೆಳೆಗೆ ಕೊಳೆರೋಗ ಕಾಣಿಸಿಕೊಂಡು ಬೆಳೆಯಲ್ಲಿ ಕುಂಠಿತವಾಗಿದೆ. ಗೋವಿನಜೋಳ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ಉತ್ತಮ ಮಳೆ:

ಪ್ರಸಕ್ತ ಸಾಲಿನಲ್ಲಿ ಜನವರಿ ೧ರಿಂದ ಈ ವರೆಗೆ ತಾಲೂಕಿನಲ್ಲಿ ೮೫೦ ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.೨ರಷ್ಟು ಮಳೆ ಜಾಸ್ತಿಯಾಗಿದೆ.

ಗುರಿಯಂತೆ ತಾಲೂಕಿನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಶೇ. ೮೦ ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಪ್ರದೇಶ ನಾಟಿಯಾದರೆ ಶೇ. ೧೦೦ ಬಿತ್ತನೆ ಪೂರ್ಣಗೊಳ್ಳಲಿದೆ. ತಡವಾಗಿ ಬಿತ್ತನೆ ಮಾಡಲಾದ ಗೋವಿನಜೋಳ ಬೆಳೆಗೆ ತೇವಾಂಶ ಹೆಚ್ಚಿದ ಪರಿಣಾಮ ಕೊಳೆರೋಗ ಕಾಣಿಸಿಕೊಂಡಿದೆ. ಉನ್ನುಳಿದ ಬೆಳೆ ಉತ್ತಮವಾಗಿದೆ. ಈ ಬಗ್ಗೆ ಔಷಧೋಪಚಾರಕ್ಕಾಗಿ ರೈತರಿಗೆ ಸಲಹೆ ನೀಡಲಾಗಿದೆ ಎನ್ನುತ್ತಾರೆ ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಮಹಾರೆಡ್ಡಿ.