ಮ‍ಳೆಯಿಂದ ಹೆಸರು ಬೆಳೆ ಇಳುವರಿ ಕುಂಠಿತ

| Published : Sep 01 2025, 01:04 AM IST

ಸಾರಾಂಶ

ಮುಂಗಾರಿನಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಹೆಸರು ಬೆಳೆ ಬಿತ್ತಿದ್ದರು. ಬೀಜ, ಗೊಬ್ಬರ, ಔಷಧಿ ಸೇರಿ ಒಂದು ಎಕರೆಗೆ ರೈತರು ₹20 ಸಾವಿರದಿಂದ ₹25 ಸಾವಿರ ಖರ್ಚು ಮಾಡಿದ್ದಾರೆ. ಈ ಹಿಂದೆ ಎಕರೆಗೆ ನಾಲ್ಕೈದು ಕ್ವಿಂಟಲ್‌ ಹೆಸರು ಬೆಳೆ ಬರುತ್ತಿತ್ತು. ಆದರೆ, ಈ ಬಾರಿ ಮಳೆಯಿಂದ ಬೆಳೆ ಹಾಳಾಗಿ ಕ್ವಿಂಟಲ್‌ನಷ್ಟೂ ಹೆಸರು ಕೈ ಸೇರಿಲ್ಲ.

ರಫೀಕ್ ಕಲೇಗಾರ

ಅಣ್ಣಿಗೇರಿ: ಸತತ ಮಳೆಯಿಂದ ಅಣ್ಣಿಗೇರಿ ಭಾಗದ ರೈತರು ಕಂಗಾಲಾಗಿದ್ದಾರೆ. ಬಿಟ್ಟೂ ಬಿಡದೆ ಸುರಿದ ಮಳೆಯಿಂದ ಈ ಭಾಗದಲ್ಲಿ ಬೆಳೆದಿದ್ದ ಹೆಸರು ಬೆಳೆ ಸಂಪೂರ್ಣ ನಾಶವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲೂಕಿನಲ್ಲಿ ಈ ಬಾರಿ ಶೇ. 80ರಷ್ಟು ಹೆಸರು ಬಿತ್ತನೆಯಾಗಿದೆ. ಇನ್ನುಳಿದಂತೆ ಉದ್ದು, ಹತ್ತಿ, ಜೋಳ ಇತರೇ ಬೆಳೆ ಬಿತ್ತನೆಯಾಗಿದೆ. ಮುಂಗಾರಿನಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಹೆಸರು ಬೆಳೆ ಬಿತ್ತಿದ್ದರು. ಬೀಜ, ಗೊಬ್ಬರ, ಔಷಧಿ ಸೇರಿ ಒಂದು ಎಕರೆಗೆ ರೈತರು ₹20 ಸಾವಿರದಿಂದ ₹25 ಸಾವಿರ ಖರ್ಚು ಮಾಡಿದ್ದಾರೆ. ಈ ಹಿಂದೆ ಎಕರೆಗೆ ನಾಲ್ಕೈದು ಕ್ವಿಂಟಲ್‌ ಹೆಸರು ಬೆಳೆ ಬರುತ್ತಿತ್ತು. ಆದರೆ, ಈ ಬಾರಿ ಮಳೆಯಿಂದ ಬೆಳೆ ಹಾಳಾಗಿ ಕ್ವಿಂಟಲ್‌ನಷ್ಟೂ ಹೆಸರು ಕೈ ಸೇರಿಲ್ಲ. ಅಲ್ಲದೆ ಇತ್ತೀಚಿಗೆ ಕೀಟಬಾಧೆಯಿಂದಲೂ ಬೆ‍ಳೆ ಹಾನಿಯಾಗಿದೆ. ಬಹುತೇಕ ಕಡೆ ತೇವಾಂಶ ಹೆಚ್ಚಾಗಿ ಬೆಳೆ ಹಂತದಲ್ಲೇ ಹೆಸರು ಮೊಳಕೆ ಒಡೆದಿದೆ. ಹೀಗಾಗಿ, ಬೆಳೆ ಬೆಳೆಯಲು ಮಾಡಿದ ಖರ್ಚೇ ವಾಪಸ್‌ ಬಾರದಂತಾಗಿದೆ.

ಈಗ ಬಂದಿರುವ ಶೇ. 20ರಷ್ಟು ಫಸಲಿನಲ್ಲಿ ಸ್ವಚ್ಛ ಮಾಡಿದ ನಂತರ ಮೂರು ನಾಲ್ಕು ಚೀಲ ಗಟ್ಟಿ ಕಾಳು ಬಂದಿವೆ. ನಾವು ಮಾಡಿದ ಖರ್ಚೂ ಬಾರದಾಗಿದೆ. ಇನ್ನು ಕೃಷಿ ಕಾರ್ಮಿಕರು, ಬೆಳೆ ಕಟಾವಿಗೆ ನೀಡಿದ ಕೂಲಿ ಸೇರಿದರೂ ಈಗ ಬಂದಿರುವ ಫಸಲಿನಲ್ಲಿ ಅರ್ಧ ಖರ್ಚೂ ಬಾರದಂತಾಗಿದೆ. ಹೀಗಾಗಿ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದು ಸಮರ್ಪಕವಾದ ಬೆಳೆ ಪರಿಹಾರ ಒದಗಿಸಬೇಕು ಎಂದು ರೈತ ಮುದಕಪ್ಪ ದಿಂಡಿ ಆಗ್ರಹಿಸಿದ್ದಾರೆ.

ಸಾಲ- ಸೋಲ ಮಾಡಿ ಹೊಲಕ್ಕೆ ಹಣ ಹಾಕಿದ್ದೇವೆ. ಹೆಚ್ಚು ಮಳೆಗೆ ಹೆಸರು ಬೆಳೆ ಹಾಳಾಗಿದೆ. ಒಂದು ಕ್ವಿಂಟಲ್‌ನಷ್ಟೂ ಫಸಲು ಬಂದಿಲ್ಲ. ಸರ್ಕಾರ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಸ್ಥಳೀಯ ರೈತ ರಮೇಶ ದೇಸಾಯಿಗೌಡ್ರು ಒತ್ತಾಯಿಸಿದ್ದಾರೆ.ಮೊದಲೆಲ್ಲ 15, 16 ಸಾವಿರ ಚೀಲ ಹೆಸರು ಬರುತ್ತಿತ್ತು. ನಮ್ಮ ಅಂಗಡಿಗೆ ಈಗ 2-3 ಸಾವಿರ ಚೀಲ ಹೆಸರು ಬರುತ್ತಿದೆ. ಅದರಲ್ಲೂ ವೇಸ್ಟೇಜ್‌ ಬಹಳ ಇದೆ ಎಂದು ದಲಾಲಿ ಅಂಗಡಿ ಮಾಲೀಕ ರಮೇಶ ರಡ್ದೇರ ಹೇಳಿದರು.