ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮಳೆಗಾಲ ಆರಂಭಗೊಂಡಿದ್ದು, ಮಳೆಯಿಂದಾಗುವ ಹಾನಿ ಹಾಗೂ ಪ್ರಸ್ತುತ ತಾಲೂಕಿನಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜೊತೆ ಜೊತೆಗೆ ನಿವಾರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ.ಎನ್ ತಿಪ್ಪೇಸ್ವಾಮಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮತಾನಾಡಿದರು.ಬಿತ್ತನೆ ಬೀಜ ವಿತರಣೆ
ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಮುಂಗಾರು ಪೂರ್ವಸಿದ್ಧತಾ ಕಾರ್ಯಗಳನ್ನು ನಿರ್ವಹಿಸಬೇಕು. ಮಳೆ ಹಾನಿಗಳನ್ನು ತಾಲೂಕಿನಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ರಾಗಿ, ಜೋಳ, ತೊಗರಿ, ಶೇಂಗಾ ಬಿತ್ತನೆ ಬೀಜಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಏಪ್ರಿಲ್ ಮಾಹೆಯಿಂದಲೇ ಬಿತ್ತನೆ ಬೀಜನಗಳ ವಿತರಣೆಗೆ ಚಾಲನೆ ನೀಡಲಾಗಿದೆ. ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದರು. ನಿಯಮಿತವಾಗಿ ರಸಗೊಬ್ಬರವನ್ನು ರೈತರಿಗೆ ಪೂರೈಸಬೇಕು. ಪ್ರಸ್ತುತ ತಾಲೂಕಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಕಾರ್ಯವನ್ನು ಮಾಡಬೇಕು. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಮಾರಾಟಗಾರರು ತಮ್ಮ ಮಳಿಗೆಗಳ ಮತ್ತು ರೈತ ಸಂಪರ್ಕ ಕೇಂದ್ರಗಳ ಮುಂಭಾಗದಲ್ಲಿ ದರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ತಾಲೂಕಿನ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು ಈ ಬಗ್ಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಕೂಡಲೇ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದರು.ತ್ಯಾಜ್ಯ ವಿಲೇವಾರಿ ಮಾಡಿ: ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಬೇಕಿದೆ. ಬ್ಲಾಕ್ ಸ್ಪಾಟ್ ಗಳಲ್ಲಿ ಸಾರ್ವಜನಿಕರು ಕಸ ಎಸೆಯಂತೆ ಅರಿವು ಮೂಡಿಸಬೇಕಿದೆ. ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸದಂತೆ ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ತಾಲೂಕನ್ನಾಗಿ ಚಿಕ್ಕ ಬಳ್ಳಾಪುರವನ್ನು ಮಾಡಬೇಕಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕೆಂದು ಸೂಚಿಸಿದರು.ಸೋರುವ ಶಾಲೆ ಮಾಹಿತಿ ನೀಡಿ ಸುಸ್ಥಿತಿಯಲ್ಲಿಲ್ಲದ ಶಾಲಾ ಕೊಠಡಿಗಳನ್ನು ಶಾಲಾ ಸಾಕ್ಷರತೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು. ಅಂತಹ ಕೊಠಡಿಗಳಲ್ಲಿ ಪಾಠ ಪ್ರವಚನಗಳನ್ನು ನಡೆಸದಂತೆ ಸೂಚನೆ ನೀಡಬೇಕು. ಹಾಗೆಯೇ ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು. ಸುಸ್ಥಿತಿಯಲ್ಲಿಲ್ಲದ ಮನೆಗಳ ಜನರನ್ನು ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದರು.ಮಳೆಯಿಂದಾಗಿ ಹಾನಿಗೊಳಗಾಗುವ ವಿದ್ಯುತ್ ಕಂಬಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಸುಸ್ಥಿತಿಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು. ಅಧಿಕ ಮಳೆಯಾದಲ್ಲಿ ಪ್ರವಾಹವನ್ನು ತಡೆಗಟ್ಟಲು ನೀರು ಸಾಗಿಸುವ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು, ಗಿಡಗಂಟಿ ಅಥವಾ ಹೂಳು ತುಂಬಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು.
ಚರಂಡಿಗಳ ಸ್ವಚ್ಛಗೊಳಿಸಲು ಕ್ರಮತಗ್ಗು ಪ್ರದೇಶಗಳಲ್ಲಿ ಮತ್ತು ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗುವಂತೆ ಕ್ರಮವಹಿಸಬೇಕು. ಈ ಎಲ್ಲಾ ಕಾರ್ಯಗಳ ಕುರಿತು ಮೇಲಾಧಿಕಾರಿಗಳು ನಿಗಾ ವಹಿಸಿ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾಲೋಚಿತ ಸೂಚನೆ ನೀಡಿ ಮಳೆ ಹಾನಿಯಿಂದಾಗಲಿ ಅಥವಾ ಬರ ಪರಿಸ್ಥಿತಿಯಿಂದಾಗಲಿ ಜನರು ಸಮಸ್ಯೆಗೆ ಸಿಲುಕದಂತೆ ಅಗತ್ಯ ಕ್ರಮವಹಿಸಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ತಹಸಿಲ್ದಾರ್ ಅನಿಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.ಸಿಕೆಬಿ-1 ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ ಮಾತನಾಡಿದರು.