ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಳೆ ಹಾನಿ

| Published : Aug 01 2024, 12:19 AM IST

ಸಾರಾಂಶ

ಮುಂಡಾಜೆ,ಕಲ್ಮಂಜ, ಚಾರ್ಮಾಡಿ,ಮಿತ್ತ ಬಾಗಿಲು, ಕಡಿರುದ್ಯಾವರ, ಬಾರ್ಯ, ತೆಕ್ಕಾರ್ ಬಂದಾರು, ಕಳೆಂಜ, ನೆರಿಯ ಮೊದಲಾದ ಗ್ರಾಮಗಳ ಹಲವು ಮನೆಗಳ ಮೇಲೆ ಗುಡ್ಡ ಕುಸಿತಗಳು ಉಂಟಾಗಿವ.

ಬೆಳ್ತಂಗಡಿ: ಬುಧವಾರ ಬೆಳಗ್ಗೆ ಕೊಂಚ ಬಿಡುವು ಪಡೆದಿದ್ದ ಮಳೆಯು ಸಂಜೆ ವೇಳೆಗೆ ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿಯಿತು. ನದಿಗಳ ಹರಿವು ಯಥಾಸ್ಥಿತಿಗೆ ತಲುಪಿದ್ದರೂ ಮತ್ತೆ ಏರಿಕೆಯಾಗುವ ಎಲ್ಲ ಸಂಭವ ಕಂಡು ಬಂದಿದೆ. ಅಲ್ಲಲ್ಲಿ ಹಾನಿಗಳು ಮುಂದುವರಿದಿದ್ದು ಜನಜೀವನ ಇನ್ನಷ್ಟೇ ಸಹಜ ಸ್ಥಿತಿಗೆ ಮರಳಬೇಕಿದೆ.

ಕಲ್ಮಂಜ ಗ್ರಾಮದ ಗುತ್ತುಬೈಲು ಸಂಪರ್ಕದ ಕಿರು ಸೇತುವೆ ಮುರಿದು ಬಿದ್ದಿದ್ದು 50ರಷ್ಟು ಮನೆಗಳು ಸಂಪರ್ಕ ಕಳೆದುಕೊಂಡಿವೆ. ಈ ಪ್ರದೇಶಕ್ಕೆ ಪುತ್ತೂರು ಎಸಿ ಜುಬಿನ್ ಮೊಹಪಾತ್ರ, ತಹಸೀಲ್ದಾರ್ ಪೃಥ್ವಿ ಸಾನಿಕಂ, ವಿಎ ರಣಿತಾ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತುರ್ತು ಘಟಕದ ಸದಸ್ಯರು ತಾತ್ಕಾಲಿಕವಾಗಿ ಅಡಕೆ ಮರದ ಸಂಕ ನಿರ್ಮಿಸಿಕೊಟ್ಟು ಕಾಲ್ನಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಪ್ರದೇಶಕ್ಕೆ ವಾಹನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಕಲ್ಮಂಜ ಗ್ರಾಮದ ಭೂತಲೆ ಮಾರು ಎಂಬಲ್ಲಿ ಗುಡ್ಡ ತೋಡಿಗೆ ಕುಸಿದ ಪರಿಣಾಮ ಬಾಲಪ್ಪ ಟಿ. ಎಂಬವರ ಕೃಷಿ ಭೂಮಿಗೆ ನೀರು ನುಗ್ಗಿ ಕೃಷಿಗೆ ಹಾನಿ ಉಂಟಾಗಿದೆ. ಇದೇ ಗ್ರಾಮದ ಮೂಲಾರು ಬಳಿ ವಿದ್ಯುತ್ ಲೈನ್ ಮೇಲೆ ಮರ ಉರುಳಿ ಬಿದ್ದು ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ಗುಡ್ಡಗಳು ಕುಸಿದು ಬೀಳುತ್ತಿದ್ದು ಗ್ರಾಮೀಣ ಭಾಗದಲ್ಲಿ ಸಂಚಾರ ಸಮಸ್ಯೆ ತಲೆದೋರಿದೆ.

ಮುಂಡಾಜೆ,ಕಲ್ಮಂಜ, ಚಾರ್ಮಾಡಿ,ಮಿತ್ತ ಬಾಗಿಲು, ಕಡಿರುದ್ಯಾವರ, ಬಾರ್ಯ, ತೆಕ್ಕಾರ್ ಬಂದಾರು, ಕಳೆಂಜ, ನೆರಿಯ ಮೊದಲಾದ ಗ್ರಾಮಗಳ ಹಲವು ಮನೆಗಳ ಮೇಲೆ ಗುಡ್ಡ ಕುಸಿತಗಳು ಉಂಟಾಗಿವ. ಕೆಲವು ಮನೆಗಳ ಗೋಡೆಗಳಿಗೂ ಹಾನಿಯಾಗಿದ್ದು ಮನೆ ಮಂದಿಯನ್ನು ಬೇರೆಡೆ ಸ್ಥಳಾಂತರಿಸಲಾಗಿದೆ .

ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಪ್ರದೇಶದಲ್ಲಿ ಹತ್ತಾರು ವಾಸ್ತವ್ಯದ ಮನೆಗಳಿಗೆ ನೀರು ನುಗ್ಗಿದ ಕಾರಣ ಕರ್ನೋಡಿ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಮುಂಡಾಜೆ ಗ್ರಾಮದ ಮೃತ್ಯುಂಜಯ ನದಿಯ ಕಡಂಬಳ್ಳಿ ಕಿಂಡಿ ಅಣೆಕಟ್ಟಿ ನಲ್ಲಿ ತುಂಬಿದ್ದ ಮರಮಟ್ಟು ಕಳೆದ ವಾರ ತೆರೆವುಗೊಳಿಸಲಾಗಿತ್ತು. ಆದರೆ ಈಗ ಪುನಃ ಇಲ್ಲಿ ಸಾಕಷ್ಟು ಮರಮಟ್ಟು ಜಮೆಯಾಗಿದೆ.

ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಮಂಗಳವಾರ ಇಲ್ಲಿನ ಹೆದ್ದಾರಿ ತೋಡಿನಂತೆ ಗೋಚರಿಸುತ್ತಿತ್ತು. ಶಿರಾಡಿ ಘಾಟಿ ಸಮಸ್ಯೆಯಿಂದ ಹೆಚ್ಚಿನ ವಾಹನ ಚಾರ್ಮಾಡಿ ಮೂಲಕ ಸಂಚರಿಸುತ್ತಿದ್ದು ಕಂಡು ಬಂದಿದ್ದು ವಾಹನದಟ್ಟಣೆಯು ಹೆಚ್ಚಿದೆ.