ಸುರಿಯುತ್ತಿರುವ ಮಳೆಯಿಂದ ಹನೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ಬೆಳಿಗ್ಗೆ 10 ಗಂಟೆಯವರೆಗೂ ಬಿಡುವಿಲ್ಲದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಬೆಳಿಗ್ಗೆ ಕಚೇರಿ, ಶಾಲೆ, ಮಾರುಕಟ್ಟೆ ಹಾಗೂ ಇತರ ಕೆಲಸಗಳಿಗೆ ತೆರಳಬೇಕಾಗಿದ್ದ ನಾಗರಿಕರು ಮಳೆಯ ನಡುವೆಯೇ ಓಡಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಸುರಿಯುತ್ತಿರುವ ಮಳೆಯಿಂದ ಹನೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ಬೆಳಿಗ್ಗೆ 10 ಗಂಟೆಯವರೆಗೂ ಬಿಡುವಿಲ್ಲದೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಬೆಳಿಗ್ಗೆ ಕಚೇರಿ, ಶಾಲೆ, ಮಾರುಕಟ್ಟೆ ಹಾಗೂ ಇತರ ಕೆಲಸಗಳಿಗೆ ತೆರಳಬೇಕಾಗಿದ್ದ ನಾಗರಿಕರು ಮಳೆಯ ನಡುವೆಯೇ ಓಡಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.ಬೆಳಿಗ್ಗೆಯಿಂದಲೂ ಆಕಾಶದಲ್ಲಿ ದಟ್ಟ ಮೋಡ ಕವಿದಿದ್ದು, ಸೂರ್ಯನ ದರ್ಶನವೇ ಆಗಿಲ್ಲ. ಜಿಟಿಜಿಟಿ ಮಳೆಯಿಂದಾಗಿ ರಸ್ತೆಗಳು ತೇವಗೊಂಡಿದ್ದು, ವಾಹನ ಸವಾರರು ನಿಧಾನವಾಗಿ ಚಲಿಸುವಂತಾಗಿದೆ. ಪಟ್ಟಣದ ಬಡಾವಣೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ನೀರು ಹರಿಯುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಿಂದ ರಕ್ಷಣೆ ಪಡೆಯಲು ಮರ, ಶೆಡ್ ಹಾಗೂ ಅಂಗಡಿಗಳ ಮೊರೆ ಹೋಗುವಂತಾಯಿತು.
ಕೆರೆಯಂತಾದ ರಸ್ತೆ:11ನೇ ವಾರ್ಡಿನ ಮಾರುತಿ ಥಿಯೇಟರ್ ಹಿಂಭಾಗದ ರಸ್ತೆ ವಿನಾಯಕ ನಗರ ಬಡಾವಣೆಗೆ ತೆರಳುವ ರಸ್ತೆಯಲ್ಲಿ ಮಳೆಯ ನೀರು ನಿಂತು ಕೆರೆಯಂತಾಗಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಹಲ್ಲೆ ಮಡುಗುಗಟ್ಟಿ ನಿಂತು ನಾಗರಿಕರು ಓಡಾಡಲು ಪರದಾಡುವ ಸ್ಥಿತಿ ಉಂಟಾಗಿತ್ತು.
ಇದೇ ವೇಳೆ, ಪ್ರಸಿದ್ಧ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಳೆಯ ನಡುವೆಯೂ ಭಕ್ತಿಯ ಸಂಭ್ರಮ ಕಂಡುಬಂದಿದೆ. ಶುಕ್ರವಾರ ರಾತ್ರಿಯಿಂದ ಸುರಿದ ಮಳೆಯ ನಡುವೆಯೂ ಅಲ್ಲಿ ದಿನನಿತ್ಯ ನಡೆಯುವ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಬೆಳ್ಳಿ ರಥೋತ್ಸವವು ಭಕ್ತಿ ವೈಭವದಿಂದ ಜರುಗಿತು. ಜಿಟಿಜಿಟಿ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಬೆಳ್ಳಿ ರಥಕ್ಕೆ ಪೂಜೆ ಸಲ್ಲಿಸಿ, ರಥ ಎಳೆಯುವಲ್ಲಿ ಪಾಲ್ಗೊಂಡು ಸಂಭ್ರಮ ಸಡಗರದಿಂದ ಉತ್ಸವವನ್ನು ಯಶಸ್ವಿಗೊಳಿಸಿದರು. ಮಳೆಯಿಂದಾಗಿ ಭಕ್ತರ ಉತ್ಸಾಹಕ್ಕೆ ಯಾವುದೇ ಕಡಿಮೆಯಾಗಲಿಲ್ಲ.ಇತ್ತ ರೈತ ವರ್ಗದಲ್ಲಿ ಮಾತ್ರ ಮಳೆಯಿಂದಾಗಿ ಸಂತಸ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದವು. ಈಗ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಭೂಮಿಗೆ ತೇವಾಂಶ ದೊರೆಯಲಿದ್ದು, ಬಿತ್ತನೆ ಹಾಗೂ ಇತರ ಕೃಷಿ ಕಾಮಗಾರಿಗಳಿಗೆ ಅನುಕೂಲವಾಗಲಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ನಾಗರಿಕರಿಗೆ ಮಳೆಯಿಂದ ತೊಂದರೆಯಾದರೂ, ರೈತರಿಗೆ ಮತ್ತು ಪರಿಸರಕ್ಕೆ ಇದು ವರದಾನವಾಗಿದೆ.