ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಮುಂಗಾರು ಮಳೆಯ ರುದ್ರನರ್ತನ ಕಾಫಿತೋಟಗಳಲ್ಲಿ ಭಾರಿ ಪ್ರಮಾಣದ ಫಸಲು ನೆಲಸೇರುವಂತೆ ಮಾಡಿದ್ದರೆ, ತಾಲೂಕಿನಲ್ಲಿ ವ್ಯಾಪಕ ಹಾನಿಗೆ ಕಾರಣವಾಗಿದೆ.ಮೇ ೭ರಿಂದ ತಾಲೂಕಿನಲ್ಲಿ ಆರಂಭವಾಗಿರುವ ಜಿಟಿಜಿಟಿ ಮಳೆಗೆ ಜಲೈ೨೭ಕ್ಕೆ ಎರಡೂವರೆ ತಿಂಗಳು ತುಂಬಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭೂಮಿ ಶೀತಪೀಡಿತಗೊಂಡಿದ್ದು ಹಲವು ಕಾಫಿತೋಟಗಳಲ್ಲಿ ಭಾರಿ ಪ್ರಮಾಣದ ಕೊಳೆರೋಗ ಕಾಣಿಸಿಕೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಫಸಲು ನೆಲಸೇರುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಚಿಂತೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ಕಳೆದ ಎರಡು ದಿನಗಳ ಹಿಂದೆ ಬಿರುಸು ಕಳೆದುಕೊಂಡಿದ್ದ ಮುಂಗಾರಿನಿಂದ ತಾಲೂಕಿನ ಹಲವೆಡೆ ಬಿಸಿಲಿನ ದರ್ಶನವಾಗಿತ್ತು. ಈ ವಾತಾವರಣದಿಂದ ಸಂತಸಗೊಂಡಿದ್ದ ಬೆಳೆಗಾರರು ಕೊಳೆರೋಗ ನಿರ್ಮೂಲನೆಗೆ ಚಿಂತನೆ ನಡೆಸಿದ್ದರು. ಆದರೆ, ಮತ್ತೆ ಮುಂಗಾರು ಬಿರುಸು ಪಡೆದುಕೊಂಡಿರುವುದರಿಂದ ಬೆಳೆಗಾರರ ವಲಯದಲ್ಲಿ ನಿರಾಸೆ ಮನೆ ಮಾಡಿದೆ.ಮತ್ತಷ್ಟು ಹಾನಿ: ಕಳೆದ ಎರಡು ದಿನಗಳಿಂದ ಬಿರುಸು ಪಡೆದಿರುವ ನಿರಂತರ ಗಾಳಿ ಮಳೆಗೆ ಹಲವೆಡೆ ಮರಗಳು ಧರೆಗೆ ಉರುಳಿದ್ದರೆ ಪಟ್ಟಣ ಸಮೀಪದ ಬಾಳೆಗದ್ದೆ ಬಡಾವಣೆ ಸಮೀಪ ಭೂಮಿ ಕುಸಿದು ನಾಲ್ಕು ಮನೆಗಳು ಅಪಾಯದ ಸ್ಥಿತಿ ತಲುಪಿವೆ. ಆನೇಮಹಲ್ ಗ್ರಾಮದಲ್ಲೂ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಒಂದು ಬದಿಯ ಚತುಷ್ಪಥ ಹೆದ್ದಾರಿ ಬಂದ್ ಆಗಿದೆ. ಬುಧವಾರ ರಾತ್ರಿ ಬೀಸಿದ ಗಾಳಿಗೆ ಪಟ್ಟಣದ ಹಲವೆಡೆ ಫ್ಲೆಕ್ಸ್, ವಾಣಿಜ್ಯ ಮಳಿಗೆಗಳ ನಾಮಫಲಕಗಳು ಹಾರಿಹೋಗಿದ್ದರೆ, ಕಿರ್ಕಳ್ಳಿ ಗ್ರಾಮದ ತಿಮ್ಮೇಗೌಡರ ದನದಕೊಟ್ಟಿಗೆ ಕುಸಿದು ಜಾನುವಾರುಗಳಿಗೆ ಪೆಟ್ಟಾಗಿದೆ.
ಅಪಾಯದ ಮಟ್ಟ ಮೀರಿ ಹರಿಯತ್ತಿರುವ ಹೇಮಾವತಿ ನದಿ ನೀರು ಶ್ರೀ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಒಳಪ್ರವೇಶಿಸಲು ಇನ್ನೊಂದು ಮೆಟ್ಟಿಲು ಬಾಕಿಯಿದ್ದು, ಗಂಟೆಗಂಟೆಗೂ ಹೆಚ್ಚುತ್ತಿರುವ ನದಿ ನೀರಿನಿಂದಾಗಿ ತಾಲೂಕು ಆಡಳಿತ ಪಟ್ಟಣದ ಅಜಾದ್ ರಸ್ತೆ ನಿವಾಸಿಗಳಿಗೆ ಬೇರೆಡೆ ತೆರಳುವಂತೆ ಎಚ್ಚರಿಕೆ ನೀಡಿ ಅಂಬೇಡ್ಕರ್ ಭವನದಲ್ಲಿ ಸಾಂತ್ವನ ಕೇಂದ್ರ ಆರಂಭಿಸಿದೆ. ಭಾರಿ ಮಳೆಗೆ ಹೆಬ್ಬನಹಳ್ಳಿ ಶಾಲೆಯ ಗೋಡೆ ಕುಸಿದಿದೆ. ತಾಲೂಕಿನ ಚಿಕ್ಕಲ್ಲೂರು ಹಾಗೂ ಯಡಕೇರಿ ಸಂಪರ್ಕಿಸುವ ಸೇತುವೆ ಮೇಲೆ ಐಗೂರು ಹೊಳೆ ಉಕ್ಕಿ ಹರಿಯುತ್ತಿದೆ. ಮಠಸಾಗರ ಗ್ರಾಮದಲ್ಲೂ ಹಳ್ಳದ ನೀರು ಸೇತುವೆ ಮೇಲೆ ಉಕ್ಕಿ ಹರಿದು ಸಮೀಪ ಅಡಿಕೆತೋಟ ಜಲಾವೃತಗೊಂಡಿದೆ. ಇದಲ್ಲದೆ ಹಲವೆಡೆ ಕಿರು ನದಿಗಳು ಭತ್ತದ ಗದ್ದೆಗಳಿಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದರಿಂದ ಸಾಕಷ್ಟು ಪ್ರದೇಶದಲ್ಲಿ ಸಸಿಮಡಿಗಳು ನೀರು ಪಾಲಾಗಿವೆ. ತಾಯಿಹೊಳೆ ಬಿಟ್ಟು ಹರಿಯದ ಹೇಮಾವತಿ ನದಿ ಸದ್ಯ ಒಂದೇ ವಾರದಲ್ಲಿ ತಾಲೂಕಿನ ಸಾವಿರಾರು ಎಕರೆ ಹಿನ್ನೀರು ಪ್ರದೇಶವನ್ನು ಅಕ್ರಮಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ೭೫ ಸೇರಿದಂತೆ ತಾಲೂಕಿನ ಬಹುತೇಕ ಲೋಕೋಪಯೋಗಿ ಇಲಾಖೆ ಹಾಗೂ ಜಿ.ಪಂ ರಸ್ತೆಗಳಿಗೆ ಚರಂಡಿ ಇಲ್ಲದ ಕಾರಣ ಕಿ.ಮಿಗಳ ದೂರದವರೆಗೆ ನದಿಯಂತೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೆ ಹಲವೆಡೆ ರಸ್ತೆಗಳು ಜಲಾವೃತಗೊಂಡು ಕೆರೆಯಂತೆ ಭಾಸವಾಗುತ್ತಿದೆ.