ಕುಕನೂರು ತಾಲೂಕಿನ ದ್ಯಾಂಪೂರು ಗ್ರಾಮದ ಶ್ರೀ ದ್ಯಾಮಾಂಬಿಕಾದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಗಜೇಂದ್ರಗಡ ಕಾಲಜ್ಞಾನ ಕೋಡಿಮಠದ ಡಾ. ಶರಣಬಸವೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಕುಕನೂರು: ಮಳೆಯಿಲ್ಲದೆ ಕಂಗಲಾದ ರೈತರ ಬದುಕಿಗೆ ಈ ವಾರದಲ್ಲಿ ಮಳೆ ಸುರಿಯುತ್ತದೆ ಎಂದು ಗಜೇಂದ್ರಗಡ ಕಾಲಜ್ಞಾನ ಕೋಡಿಮಠದ ಡಾ. ಶರಣಬಸವೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ದ್ಯಾಂಪೂರು ಗ್ರಾಮದ ಶ್ರೀ ದ್ಯಾಮಾಂಬಿಕಾದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಕಳೆದ ನಾಲ್ಕೈದು ವರುಷಗಳ ಹಿಂದೆ ಇದೇ ರೀತಿ ಬರ ಆವರಿಸಿತ್ತು. ಕಲಾವಿದರಾದ ಶರಣಪ್ಪ ಜೂಟ್ಟಲ್ ಹಾಗೂ ಫಕೀರಸಾಬ ಕಲಬಂಡಿ ಅವರ ಮೂಲಕ ಮೇಘ ಮಾಲಾ ರಾಗ ಹಾಡಿಸಿದಾಗ ಹೆಚ್ಚಿನ ಮಳೆ ಸುರಿದ ಉದಾಹರಣೆ ಇವೆ. ಪುರಾಣದಲ್ಲಿ ಸಂಗೀತಕ್ಕೆ ಹೆಚ್ಚಿನ ಮಹತ್ವ ಇದೆ. ಬರುವ ದಿನಗಳಲ್ಲಿ ಕೃಷಿ, ಶೈಕ್ಷಣಿಕ, ಸಮಾಜ ಸೇವಾ ವಲಯದಲ್ಲಿ ಈ ಭಾಗದಿಂದ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ. ಹಿಂಗಾರು ಬೆಳೆ ಉತ್ತಮ ಫಸಲು ಬರುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಕೆಲವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಾ ಸಾಗಿದ್ದಾರೆ. ನಾನು ಎಂದಿಗೂ ಜನಸೇವೆ ಮಾಡುವುದನ್ನು ಬಿಡುವುದಿಲ್ಲ. ಅಲ್ಲದೆ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಆಗುವುದಿಲ್ಲ. ದೇವಿ ಆಣೆಗೂ ಮುಂದಿನ ದಿನದಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಜನಸೇವೆಗೆ ಹೆಚ್ಚಿನ ರೀತಿಯಲ್ಲಿ ಅಣಿಯಾಗುತ್ತೇನೆ ಎಂದರು.
ದೇವಿ ಪುರಾಣ ಸಮಿತಿ ಅಧ್ಯಕ್ಷ ಶಿವಾನಂದಯ್ಯ ಕಾಡಗಿಮಠ, ಪ್ರಮುಖರಾದ ಜಗದೀಶ ಹಿರೇಮಠ, ವೀರಣ್ಣ ಬಡಿಗೇರ, ಈಶಯ್ಯ ಶಿರೂರುಮಠ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ, ಮುರಾರಿ ಆರೇರ, ಜಗದೀಶ ಮಂಡಲಗೇರಿ, ಬಸವರಾಜ ಬಿಡಿನಾಳ, ಶರಣಪ್ಪ ಬಿಡಿನಾಳ, ಗುಂಡಯ್ಯ ಶಿರೂರಮಠ, ವೀರಯ್ಯ ಸಸಿಮಠ, ರಾಜಶೇಖರಯ್ಯ, ಸಂಗಪ್ಪ ನೋಟಗಾರ, ರವಿ ಸಿಂಧೆ ಇತರರಿದ್ದರು.