ಸಾರಾಂಶ
ಕನ್ನಡಪ್ರಭವಾರ್ತೆ ಹನೂರು
ಮಳೆಯಾಶ್ರಿತ ಬೇಸಾಯ ನಿಜಕ್ಕೂ ಮನುಕುಲಕ್ಕೆ ವರದಾನ ಎಂದು ಸಹಜ ಕೃಷಿ ವಿಜ್ಞಾನಿ ಡಾ.ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ವಡಕೆಹಳ್ಳ ಗ್ರಾಮದ ಶ್ರೀ ಮಹದೇಶ್ವರ ಸಿರಿಧಾನ್ಯ ಘಟಕದ ಆವರಣದಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ರೈತ ಸಂಘ ಮತ್ತು ತಾಪಂ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಳೆಯಾಶ್ರಿತ ಬೇಸಾಯ ಮತ್ತು ಜೀವನೋಪಾಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಳೆಯಾಶ್ರಿತ ಬೇಸಾಯದಲ್ಲಿ ನಾವು ಅಕ್ಕಡಿಸಾಲು ಪದ್ದತಿಯನ್ನು ಅನುಸರಿಸಿ ಬಹು ಬೆಳೆಗಳನ್ನು ಬೆಳೆಯುತ್ತಿದ್ದೆವು. ಈಗ ರಾಸಾಯನಿಕ ಗೊಬ್ಬರ-ಕೀಟನಾಶಕ ಬಂದ ನಂತರ, ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಜಾಸ್ತಿಯಾಗಿ, ನಮ್ಮ ಪಾರಂಪರಿಕ ಕೃಷಿ ಪದ್ದತಿಗಳು, ಅಕ್ಕಡಿಸಾಲು ಪದ್ದತಿ ಮಾಯವಾಗುತ್ತಿದೆ ಎಂದರು. ಮಳೆಯಾಶ್ರಿತ ಬೇಸಾಯದಲ್ಲಿ ವೈಜ್ಞಾನಿಕ ವಿಚಾರಗಳಿವೆ. ಯಾವ ಪ್ರದೇಶಕ್ಕೆ ಯಾವ ರೀತಿಯ ಬೆಳೆ ಸೂಕ್ತ. ಏಕೆ ಕೆಲವು ಬೆಳೆಗಳನ್ನು ನಾವು ಹೊಲದ ಬದುಗಳಲ್ಲೇ ಬೆಳೆಯಬೇಕು. ಅಕ್ಕಡಿ ಸಾಲು ಪದ್ದತಿಯಲ್ಲಿ ನಾಲ್ಕೈದು ಸಾಲುಗಳಲ್ಲಿ ರಾಗಿ ಬೆಳೆದು, ಆರನೇ ಸಾಲಿನಲ್ಲಿ ಅವರೆ ಅಥವಾ ಅಲಸಂದೆ ಅಥವಾ ಜೋಳದ ಸಾಲು ಇರಬೇಕು. ನಂತರ ಮತ್ತೆ ನಾಲ್ಕೈದು ಸಾಲು ರಾಗಿ ಹಾಕಿ, ಹರಳನ್ನು ಒಂದು ಸಾಲು ಹಾಕಬೇಕು. ಬದುಗಳಲ್ಲಿ ಸಾಸಿವೆ ಹಾಕಬೇಕು. ಮಧ್ಯ ಮಧ್ಯೆ ವಿವಿಧ ಜಾತಿಯ ಕಾಳುಗಳನ್ನು ಬೆಳೆಯಬೇಕು ಎಂದು ನಮ್ಮ ಹಿರಿಯರು ನಮಗೆ ತಿಳಿಸಿ ಹೋಗಿದ್ದಾರೆ. ಅದರ ಹಿಂದೆ ವಿಜ್ಞಾನ ಅಡಗಿದೆ.ಪ್ರತಿ ಗಿಡಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದರ ಬೇರು ಇನ್ನೊಂದಕ್ಕೆ ಔಷಧಿ ಆಹಾರವಾಗುತ್ತದೆ. ಒಂದರ ಹೂವು ಇನ್ನೊಂದಕ್ಕೆ ಪ್ರಚೋದನೆ ನೀಡುತ್ತದೆ. ವಿವಿಧ ಚಿಟ್ಟೆಗಳು, ಹಕ್ಕಿ-ಪಕ್ಷಿಗಳನ್ನು ಆ ಹೂವುಗಳು ಆಕರ್ಷಿಸುತ್ತವೆ. ಅವು ಹೊಲದಲ್ಲಿ ಅಡಗಿರುವ ಕೀಟಗಳನ್ನು ತಿನ್ನುತ್ತವೆ. ಇಲಿಗಳನ್ನು ಹಿಡಿಯುತ್ತವೆ. ಇದರಿಂದಾಗಿ ನಮ್ಮ ಮುಖ್ಯ ಬೆಳೆಯಾದ ರಾಗಿ, ಸಜ್ಜೆ, ಜೋಳದ ಇಳುವರಿ ಹೆಚ್ಚಾಗುತ್ತದೆ. ಅನಾದಿ ಕಾಲದಿಂದಲೂ ಪಾರಂಪರಿಕವಾಗಿ ಬಂದಂತಹ ಕೃಷಿ ಪದ್ಧತಿಯನ್ನು ನಾವು ಬಿಡದೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.ಜೆಎಸ್‌ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಮಾತನಾಡಿ, ಪ್ರತಿ ರೈತನೂ ಹಸು, ಎಮ್ಮೆ, ಆಡು, ಕುರಿ, ಕೋಳಿ ಸೇರಿದಂತೆ ಕನಿಷ್ಠ ನಾಲ್ಕು ಜಾನುವಾರುಗಳನ್ನು ಅವರ ಮನೆಯಲ್ಲಿ ಸಾಕಬೇಕು. ಜಮೀನಿನಲ್ಲೇ ಬೆಳೆಯುವ ಕಳೆ, ಹುಲ್ಲು, ಸೊಪ್ಪುಗಳನ್ನೇ ಆಹಾರವಾಗಿ ನೀಡಬೇಕು. ಮೇವಿಲ್ಲದೇ ಇರುವ ಸಮಯದಲ್ಲಿ ಊರಿನ ಬಳಿಯಿರುವ ಕಾಡು, ಹಳ್ಳ, ಕರೆ ಕಟ್ಟೆಗಳ ಹತ್ತಿರ ಮೇಯಿಸಿ ಬೆಳೆಸಬೇಕು. ಅವು ಜೀವನೋಪಾಯದ ಖರ್ಚಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ರೈತ ಸಂಘದ ಹೊನ್ನೂರು ಪ್ರಕಾಶ್ ಮಾತನಾಡಿ, ಜೀವನೋಪಾಯಕ್ಕಾಗಿ ಒಂದಷ್ಟು ಉಪಕಸುಬುಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಆಹಾರ ಧಾನ್ಯಗಳ ಮೌಲ್ಯೀಕರಣ, ಮೌಲ್ಯವರ್ಧನೆ ಮಾಡಬೇಕು. ಧಾನ್ಯಗಳನ್ನು ಮಾರುವ ಬದಲು ಅದನ್ನು ಪುಡಿ ಮಾಡಿ, ಮಾಲ್ಟ್ ಮಾಡುವುದು, ಮಿಠಾಯಿ ಮಾಡಿ ಪ್ಯಾಕ್ ಮಾಡಿ ಮಾರಿದರೆ ನಮಗೆ ಆದಾಯ ಹೆಚ್ಚಾಗುತ್ತದೆ. ಇನ್ನೂ ರೂಢಿಗತವಾಗಿ ಬಂದಿರುವ ಕೆಲವು ಕಸುಬುಗಳಾದ ಕುಲುಮೆ, ಮರಗೆಲಸ, ಕಟ್ಟಡಕೆಲಸಗಳು, ಮಹಿಳೆಯರು ಕಾರದಪುಡಿ, ಚಟ್ನಿಪುಡಿ ಇತ್ಯಾದಿ ಮಾಡಿ ಮಾರುವುದರಿಂದ ನಮಗೆ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು ಎಂದರು.ಈ ವೇಳೆ ರೈತ ಸಂಘದ ಮಾದೇಶ, ಚಂಗಡಿ ಕರಿಯಪ್ಪ, ಬೊಮ್ಮಯ್ಯ, ಶ್ರೀಕಾಂತ, ಪ್ರವೀಣ, ಜಗದೀಶ, ಶಿವಮೂರ್ತಿ ಇತರರು ಭಾಗವಹಿಸಿದ್ದರು.