ಸಾರಾಂಶ
ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದಲ್ಲಿ ಜಲಸಂಕಷ್ಟ। ಪ್ರವಾಹದ ನೀರಲ್ಲಿ ಮುಳುಗಿದ ಸೇತುವೆ, ಸ್ನಾನಘಟ್ಟ
ಕನ್ನಡಪ್ರಭ ವಾರ್ತೆ ಬೆಂಗಳೂರುಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್, ಟಿಪ್ಪರ್, ಎರಡು ಕಾರುಗಳು ಸೇರಿದಂತೆ ಆರು ವಾಹನಗಳು ಮಣ್ಣಿನಲ್ಲಿ ಸಿಲುಕಿವೆ. ವಾಹನದಲ್ಲಿದ್ದವರನ್ನು ರಕ್ಷಿಸಲಾಗಿದೆ. ಹೆದ್ದಾರಿ ಸಂಚಾರ ಬಂದ್ ಆಗಿದೆ. ತಾಲೂಕಿನ ಕಡಗರಹಳ್ಳಿ ಸಮೀಪ ಭೂಕುಸಿತದಿಂದ ಹಾನಿಗೊಳಗಾಗಿರುವ ರೈಲ್ವೆ ಹಳಿ ದುರಸ್ಥಿ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಕಬಿನಿಯಿಂದ 80 ಸಾವಿರ, ಕೆಆರ್‌ಎಸ್‌ನಿಂದ 1.10 ಲಕ್ಷ ಕ್ಯುಸೆಕ್ ನೀರು ಬಿಡುಗಡೆ:ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಹಾರಂಗಿ, ಹೇಮಾವತಿ ಜಲಾಶಯಗಳಿಂದ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ 68,192 ಕ್ಯುಸೆಕ್ ಇದೆ. ಹೀಗಾಗಿ, ಸುಮಾರು 1.10 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ನದಿಯ ಎರಡೂ ದಂಡೆಗಳಲ್ಲಿರುವ ಜನರು, ತಗ್ಗು ಪ್ರದೇಶದಲ್ಲಿ ವಾಸಿಸುವವರು ತಮ್ಮ ಆಸ್ತಿಪಾಸ್ತಿ, ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಕೋರಿದ್ದಾರೆ.====ಹರಿಯುವ ನೀರಲ್ಲೇ ಸೇತುವೆ ದಾಟಿದ ಶಾಲಾ ವಾಹನ:ಹಾಸನ ಜಿಲ್ಲೆ ಆಲೂರು ತಾಲೂಕಿನ ಕೂಡಿಗೆ-ಮಗ್ಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ. ಆದರೂ, ಮಕ್ಕಳಿದ್ದ ಖಾಸಗಿ ಶಾಲೆಯ ವಾಹನವೊಂದು ಸೇತುವೆ ಮೇಲಿನ ನೀರಿನಲ್ಲಿಯೇ ಹಾದು ಹೋಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.========ದೇವಾಲಯಕ್ಕೆ ಬಂದ ನಾಗರ:ಹಾಸನ ಜಿಲ್ಲೆ ಸಕಲೇಶಪುರದ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನಕ್ಕೆ ಪ್ರವಾಹದ ನೀರು ನುಗ್ಗಿದ್ದು, ಪೂಜಾ ಕಾರ್ಯ ಸ್ಥಗಿತಗೊಂಡಿದೆ. ಈ ಮಧ್ಯೆ ದೇವಾಲಯದಲ್ಲಿ ನಾಗರ ಹಾವೊಂದು ಹೆಡೆ ಬಿಚ್ಚಿ ನಿಂತಿದ್ದು, ಮಳೆಯ ನೀರಿನಲ್ಲಿಯೇ ನಾಗರ ಹಾವನ್ನು ನೋಡಲು ಜನರು ಮುಗಿಬಿದ್ದದ್ದು ಕಂಡು ಬಂತು.
=======ಶೃಂಗೇರಿ ಪೇಟೆ ಹಲವೆಡೆ ಜಲಾವೃತ:ಭಾರಿ ಮಳೆಗೆ ತುಂಗಾ ನದಿಯಲ್ಲಿ ಪ್ರವಾಹ ಬಂದಿದ್ದು, ತುಂಗಾ ನದಿ ದಡದಲ್ಲಿರುವ ಶೃಂಗೇರಿಯ ಶಾರದಾಂಬಾ ದೇಗುಲ ಸೇರಿ ಮಠದ ಸುತ್ತಮುತ್ತ ಪ್ರವಾಹ ಆವರಿಸಿದೆ. ಕಪ್ಪೆ ಶಂಕರ ದೇವಾಲಯ, ಸಂಧ್ಯಾವಂದನೆ ಮಂಟಪ ಮುಳುಗಡೆಯಾಗಿದ್ದು, ಮಠದ ಭೋಜನ ಶಾಲೆ, ಸುತ್ತಮುತ್ತಲಿನ ಕಟ್ಟಡಗಳು ಜಲಾವೃತಗೊಂಡಿವೆ. ಪೇಟೆಯ ಗಾಂಧಿ ಮೈದಾನ, ಯಾತ್ರಿ ನಿವಾಸ, ಭಾರತಿ ಬೀದಿ, ಕೆವಿಆರ್ ವೃತ್ತಗಳಲ್ಲಿ ನೀರು ಆವರಿಸಿಕೊಂಡಿದೆ.
=======ಭಾಗಮಂಡಲ ಮತ್ತೆ ಜಲಾವೃತ:ಕೊಡಗಿನಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸುಮಾರು 27 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಭಾರಿ ಮಳೆಯಿಂದಾಗಿ ಭಾಗಮಂಡಲ ಮತ್ತೆ ಜಲಾವೃತಗೊಂಡಿದೆ. ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗೂ ಪ್ರವಾಹದ ನೀರು ಬಂದಿದ್ದು, ಅರ್ಚಕರು ಕಾವೇರಿಗೆ ಶಾಂತಳಾಗುವಂತೆ ಪೂಜೆ ಸಲ್ಲಿಸಿದರು. ಕುಶಾಲನಗರದ ಸಾಯಿ ಬಡಾವಣೆ ಜಲಾವೃತಗೊಂಡಿದ್ದು, 10ಕ್ಕೂ ಹೆಚ್ಚು ಮನೆಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
=====ಕಾವೇರಿ ಹಿನ್ನಿರಿನಲ್ಲಿ ಸಿಲುಕಿದ್ದ 6 ಮಂದಿಯ ರಕ್ಷಣೆ:ಭಾರಿ ಮಳೆಗೆ ಕಾವೇರಿಯಲ್ಲಿ ಪ್ರವಾಹ ಬಂದಿದ್ದು, ವಿರಾಜಪೇಟೆ ತಾಲೂಕಿನ ಕಾಕೋಟುಪರಂಬಿನಲ್ಲಿ ಕಾವೇರಿಯ ಹಿನ್ನೀರಿನಲ್ಲಿ 6 ಮಂದಿ ಸಿಲುಕಿಕೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅವರೆಲ್ಲರನ್ನೂ ರಕ್ಷಿಸಿದ್ದಾರೆ.
=====ಬಿದನೂರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು:ಶಿವಮೊಗ್ಗ ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಬಿದನೂರು ಪಟ್ಟಣದಲ್ಲಿ ರಾಜ್ಯದಲ್ಲೇ ಅತ್ಯಧಿಕ 316 ಮಿ.ಮೀ. ಮಳೆ ದಾಖಲಾಗಿದೆ.
=====ನೇತ್ರಾವತಿ-ಕುಮಾರಧಾರಾ ಸಂಗಮದಲ್ಲಿ ಭಕ್ತರಿಂದ ಪವಿತ್ರ ತೀರ್ಥ ಸ್ನಾನ:ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ಮಂಗಳವಾರ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನದಿಗಳೆರಡು ಪುನರಪಿ ಸಂಗಮಿಸಿದವು. ಈ ವೇಳೆ, ದೇವಾಲಯಕ್ಕೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಂಗಮಕ್ಕೆ ವಿಶೇಷ ಪೂಜೆ ಮಾಡಿ, ಬಾಗಿನ ಸಮರ್ಪಿಸಿದರು. ಈ ಸಂಗಮ ಪೂಜೆ ವೀಕ್ಷಿಸಲು ಜನಸಾಗರವೇ ದೇವಸ್ಥಾನದತ್ತ ಹರಿದು ಬಂದಿತ್ತು. ಭಕ್ತರು ತೀರ್ಥ ಸಂಪ್ರೋಕ್ಷಣೆ ಮಾಡಿದರು, ಹಲವರು ತೀರ್ಥ ಸ್ನಾನ ಮಾಡಿದರು.
====ಉಜಿರೆ ಎಸ್‌ಡಿಎಂ ಆಸ್ಪತ್ರೆ ಬಳಿ ಕಂಪೌಂಡ್ ಕುಸಿತ:ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆ ಬಳಿಯ ಕಂಪೌಂಡ್ ಕುಸಿದಿದ್ದು, ಅದರ ಅಡಿಯಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಆವರಣ ಗೋಡೆಯ ಮೇಲಿನ ಭಾಗದಲ್ಲಿರುವ ಮನೆ ಕೂಡ ಅಪಾಯದ ಸ್ಥಿತಿಯಲ್ಲಿದೆ.