ಸಾರಾಂಶ
ಗುಳೇದಗುಡ್ಡ : ಅಶ್ವಿನಿ, ರೋಹಿಣಿ, ಮೃಗಶಿರ, ಆರಿದ್ರಾ, ಹುಬ್ಬ, ಹಸ್ತ, ಚಿತ್ತ ಮಳೆಗಳು ಸಂಪೂರ್ಣವಾಗಿರಲಿವೆ. ಉತ್ತಮ ಬೆಳೆ ಬೆಳೆದು ಈ ವರ್ಷ ಸಮೃದ್ಧಿಯ ಸುಗ್ಗಿ ಕಾಲವಾಗಿರಲಿದೆ ಎಂದು ಮಲ್ಲೇಶಪ್ಪಗೊಬ್ಬಿ ಹೇಳಿಕೆ ನುಡಿದರು.
ಭಾನುವಾರ ಪಟ್ಟಣದ ಮಾರವಾಡಿ ಬಗೀಚ್‌ನಲ್ಲಿ ಬೆಳಗಿನ ಜಾವ 6 ಗಂಟೆಗೆ ಯುಗಾದಿ ಭವಿಷ್ಯ ಫಲದ ಹೇಳಿಕೆಯನ್ನು ಹೇಳಿದರು. ಮುದ್ರಣಯಂತ್ರ ಹಾಗೂ ಕೃಷಿ ಕೆಲಸ ಚೆನ್ನಾಗಿ ನಡೆಯಲಿವೆ. ಶೇಂಗಾ, ಹೆಸರು, ಎಳ್ಳು, ಮಡಕೆ, ಗುರೆಳ್ಳು ಹೆಚ್ಚು ತೇಜಿಯಾಗಿರಲಿದೆ. ಬಸವಣ್ಣನ ಮುಂದಿನ ಬುತ್ತಿ ಚೆನ್ನಾಗಿದ್ದು ದೇಶದ ಜನರಿಗೆ ಅನ್ನದ ಕೊರತೆ ಆಗುವುದಿಲ್ಲ. ಗುಳೇದಗುಡ್ಡದ ಖಣಕ್ಕೆ ಈ ವರ್ಷ ಸಾಧಾರಣ ಬೆಲೆ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಪ್ಪಚಿಂದಿ ಯುಗಾದಿ ಭವಿಷ್ಯ ಹೇಳಿದರು.ಮಲ್ಲೇಶಪ್ಪ ಶಿಪರಿ, ಈರಣ್ಣಹೊಟ್ಟಿ , ಎಸ್.ಎ.ಪರಗಿ,ಮೋಹನ ಕರನಂದಿ, ಮಾಗುಂಡಪ್ಪಚಿಂದಿ,ಶಂಕರರಂಜಣಗಿ,ಪ್ರಶಾಂತರಂಜಣಗಿ,ಈರಣ್ಣ ಹಟ್ಟಿಇದ್ದರು.
ಹೇಳಿಕೆಗಿದೆ ಶತಮಾನದ ಇತಿಹಾಸ:
ಪ್ರತಿವರ್ಷ ನಡೆಯುವ ಈ ಯುಗಾದಿ ಭವಿಷ್ಯ ಪರಂಪರೆಗೆ ಶತಮಾನದ ಇತಿಹಾಸವಿದೆ. ಇಲ್ಲಿ ಮಳೆ, ಬೆಳೆ, ವ್ಯಾಪಾರ, ವಹಿವಾಟು ಹೀಗೆ ವರ್ಷದ ಭವಿಷ್ಯ ಹೇಳಲಾಗುತ್ತದೆ. ಹಿಂದಿನ ದಿನದ ರಾತ್ರಿಯೇ ಬಗೀಚ್‌ನಲ್ಲಿ ಸುಮಾರು 20 ಅಡಿ ಸ್ಥಳವನ್ನು ಹೇಳಿಕೆಗೆ ಸಿದ್ಧಗೊಳಿಸಿ ಸುತ್ತಲೂ ಜೋಳದ ದಂಟಿನಿಂದ ಬೇಲಿ ಹಾಕಲಾಗಿರುತ್ತದೆ. ಈ ಭವಿಷ್ಯವಾಣಿ ಕೇಳಲು ನೂರಾರು ಜನರು ಬೆಳಗಿನ ಜಾವ ಜಮಾಯಿಸಿದ್ದರು.
ಒಳಗಡೆ ಒಂದು ಕಡೆ ರೈತ ಹೊಲ ಉಳುಮೆ ಮಾಡುವ ಮಣ್ಣಿನ ಮೂರ್ತಿ, ಖಣಗಳು, ಬಣ್ಣಬಣ್ಣದ ಬಟ್ಟೆಗಳನ್ನು ಅಲ್ಲಲ್ಲಿ ಹಾಕಲಾಗಿರುತ್ತದೆ. ಮಧ್ಯೆ ಮಣ್ಣಿನಿಂದ ಗದ್ದುಗೆ ಮಾಡಿ ಅದರಲ್ಲಿ ದ್ವಿದಳ ಧಾನ್ಯಗಳನ್ನು ಹಿಂದಿನ ದಿನವೇ ರಾತ್ರಿ ಮುಚ್ಚಿಟ್ಟು ಅದರ ಹತ್ತಿರ ಎಕ್ಕಿ ಎಲೆಗಳನ್ನು ಇಡಲಾಗಿರುತ್ತದೆ. ಮರುದಿನ ಬೆಳಗ್ಗೆ ಇವುಗಳ ಲಕ್ಷಣ ನೋಡಿ ಭವಿಷ್ಯ ಹೇಳುವುದು ವಾಡಿಕೆ. ಬೆಳಗಿನ ಜಾವ ಈ ಸ್ಥಳದಲ್ಲಿ ರತ್ನಪಕ್ಷಿ ಕಂಡ ನಂತರವೇ ಭವಿಷ್ಯ ಹೇಳಲು ಆರಂಭಿಸುವುದು ವಿಶೇಷವಾಗಿದೆ.
ನೂರಾರು ವರ್ಷಗಳಿಂದ ಹಿರಿಯರಿಂದ ಬಂದ ಮಳೆ, ಬೆಳೆ, ವ್ಯಾಪಾರದ ವಹಿವಾಟು ಕುರಿತಾದ ಹೇಳಿಕೆಯನ್ನು ಇಂದಿಗೂ ನಾವು ಪಾಲಿಸಿಕೊಂಡು ಬಂದಿದ್ದೇವೆ.
-ಮಲ್ಲೇಶಪ್ಪ ಗೊಬ್ಬಿ ಇಲಾಳ ಮ್ಯಾಳದ ಹಿರಿಯರು.