ಮಳೆ: ಬಂಟ್ವಾಳ ತಾಲೂಕಿನ ಹಲವೆಡೆ ಭಾರೀ ಹಾನಿ

| Published : Apr 10 2025, 01:20 AM IST

ಮಳೆ: ಬಂಟ್ವಾಳ ತಾಲೂಕಿನ ಹಲವೆಡೆ ಭಾರೀ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳ ತಾಲೂಕಿನ ಹಲವೆಡೆ ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ, ಮಳೆಗೆ ತಾಲೂಕಿನ ಹಲವೆಡೆ ಹಾನಿಯಾಗಿದೆ.ಕೆಲವೆಡೆ ಬೃಹತ್ ಮರಗಳು ಧರೆಗುರುಳಿದರೆ, ಇನ್ನು ಅನೇಕ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಕಲಾದ ಬ್ಯಾನರ್‌ಗಳು ನೆಲಕಚ್ಚಿವೆ, ಹಲವು ಮನೆಗಳು ಹೆಂಚು, ತಗಡು ಶೀಟುಗಳು ಹಾರಿ ಬಿದ್ದಿವೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಾಣಿ-ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ತೆಂಗಿನ ಮರವೊಂದು ವಿದ್ಯುತ್‌ ತಂತಿ ಕಂಬದ ಮೇಲೆ ಬಿದ್ದು, ರಸ್ತೆಗೆ ಬಿದ್ದ ಕಾರಣ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಅವಘಡದ ವೇಳೆ ಬೈಕಿನಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಮೆಸ್ಕಾಂಗೆ ಮಾಹಿತಿ ನೀಡಿದ ಸ್ಥಳೀಯರು, ತೆಂಗಿನ ಮರ ಹಾಗೂ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಾಳ್ತಿಲ ಗ್ರಾಮದ ಬೇಬಿ ಎಂಬವರ ಮನೆಯ ಶೀಟು ಛಾವಣಿಗೆ ಹಾನಿಯಾಗಿದೆ, ನಾವೂರ ಮೈಂದಾಲ ನಿವಾಸಿ ಮೇರಿ ಡಿಸೋಜ ಅವರ ಮನೆ ‌ಮೇಲೆ ಮರ ಬಿದ್ದು ಹಾನಿಯಾಗಿದೆ. ನಾವೂರ ಮೈಂದಾಲ ನಿವಾಸಿ ಇಲ್ಯಾಸ್ ಮನೆ ಮೇಲ್ಛಾವಣಿಗೆ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಮುಗೇರಪಡ್ಪು ಯಶೋಧ ಎಂಬವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದೆ.

ನಾವೂರ ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಮಹಮ್ಮದ್ ಇಸಾಕ್ ಅವರ ಮನೆಗೆ ಹಾನಿ, ನಾವೂರು ಗ್ರಾಮದ ಗಿರಿಜಾ ಎಂಬವರ ನೆಯ ಮೇಲ್ಛಾವಣಿಗೆ ಹಾನಿಯಾದ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಜೆ ೪.೩೦ ರ ವೇಳೆಗೆ ಬಿ.ಸಿ.ರೋಡಿನಲ್ಲಿಯೂ ಭಾರಿ ಗಾಳಿ ಬೀಸಿದ್ದು, ಏಕಾಏಕಿ ಮೋಡ ಆವರಿಸಿದ್ದರಿಂದ ಜನತೆ ಆತಂಕ ಎದುರಿಸಿದರು.