ಹಾವೇರಿ ಜಿಲ್ಲಾದ್ಯಂತ ಮಳೆ, ಮಲೆನಾಡಿನ ವಾತಾವರಣ

| Published : May 21 2025, 12:03 AM IST

ಸಾರಾಂಶ

ಶಿಗ್ಗಾಂವಿ, ರಾಣಿಬೆನ್ನೂರು ತಾಲೂಕುಗಳಲ್ಲಿ ಮಳೆ ಜೋರಾಗಿದ್ದರೆ, ಇನ್ನು‍ಳಿದ ತಾಲೂಕುಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ.

ಹಾವೇರಿ: ಜಿಲ್ಲಾದ್ಯಂತ ಮಂಗಳವಾರ ದಿನವಿಡಿ ಜಿಟಿಜಿಟಿ ಮಳೆಯಾಗುತ್ತಿದ್ದು, ಮಲೆನಾಡಿನ ರೀತಿ ತಂಪು ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯ ಶಿಗ್ಗಾಂವಿ, ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್ಲ, ಹಾವೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲೂ ಮಳೆ ವಿಸ್ತರಣೆಯಾಗಿದ್ದು, ಕೃಷಿ ಕಾರ್ಯಕ್ಕೆ ರೈತರನ್ನು ಅಣಿಗೊಳಿಸಿದೆ.

ಶಿಗ್ಗಾಂವಿ, ರಾಣಿಬೆನ್ನೂರು ತಾಲೂಕುಗಳಲ್ಲಿ ಮಳೆ ಜೋರಾಗಿದ್ದರೆ, ಇನ್ನು‍ಳಿದ ತಾಲೂಕುಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಇದರಿಂದ ಮಾರುಕಟ್ಟೆ ಪ್ರದೇಶ, ರಸ್ತೆಗಳು ರಾಡಿಮಯವಾಗಿವೆ. ಅದರಲ್ಲೂ ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳಲ್ಲಿ ಸಂಚಾರವೇ ದುಸ್ತರವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಣ್ಣು, ಹೂವು ಸೇರಿದಂತೆ ಬೀದಿಬದಿ ವ್ಯಾಪಾರ, ವಹಿವಾಟಿನಲ್ಲಿ ಕುಸಿತ ಕಂಡಿದೆ. ಹಾವೇರಿ ಹೊರವಲಯದಲ್ಲಿ ಅಲೆಮಾರಿಗಳ ಟೆಂಟ್‌ಗಳು ಗಾಳಿಗೆ ತೂರಿ ಹೋಗಿದ್ದು, ನಿವಾಸಿಗಳು ಆತಂಕದಲ್ಲೇ ದಿನ ನೂಕುವಂತಾಗಿದೆ.

ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ಹೊಲ ಗದ್ದೆಗಳು, ತೋಟಗಳಲ್ಲಿ ನೀರು ನಿಂತಿದೆ. ಅಡಕೆ ತೋಟಗಳಲ್ಲಿ ನೀರು ನಿಂತಿದೆ. ಮೇ ತಿಂಗಳಲ್ಲಿ ಉತ್ತಮ ಮಳೆಯಾದ್ದರಿಂದ ತೋಟಗಾರಿಕೆ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗದ್ದರಿಂದ ರೈತರು ಖುಷಿಯಾಗಿದ್ದಾರೆ. ಬಿತ್ತನೆಗೆ ರೈತರು ಹೊಲ ಸಿದ್ಧಪಡಿಸುವ ಕಾರ್ಯ ಮಾಡುತ್ತಿದ್ದರೆ, ಇನ್ನು ಕೆಲವು ಕಡೆ ರೈತರು ಬಿತ್ತನೆ ಆರಂಭಿಸಿದ್ದಾರೆ. ಮಾನ್ಸೂನ್‌ ಪ್ರವೇಶಕ್ಕೂ ಮುನ್ನವೇ ಬಿತ್ತನೆ ಮಾಡಿರುವ ರೈತರು, ಮುಂಬರುವ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.ನಿರಂತರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ

ಬ್ಯಾಡಗಿ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬ್ಯಾಡಗಿ ಧೂಳೀಕೊಪ್ಪ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅದೃಷ್ಟವಶಾತ್ ಅವಘಡ ಸಂಭವಿಸಿಲ್ಲ.ಕಳೆದ ಮೂರ‍್ನಾಲ್ಕು ದಿನಗಳಿಂದ ಗುಡುಗು, ಮಿಂಚು ಸಹಿತ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆಗಳಲ್ಲಿ ಮರಗಳು ನೆಲಕ್ಕುರುಳಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ಹಲವು ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

10 ಕಂಬಗಳು ನೆಲಕ್ಕೆ: ನಿರಂತರ ಮಳೆಗೆ ಹಿರೇಕೆರೂರು ತಾಲೂಕಿನ ಲಿಂಗಾಪುರ ಗ್ರಾಮದ ಬಳಿಯಿರುವ ಹೊಸ ಕೆಇಬಿ ಗ್ರೀಡ್‌ನಿಂದ ಧೂಳಿಕೊಪ್ಪ ಗ್ರಾಮದವರೆಗೆ ಸುಮಾರು ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ಕಂಬಗಳನ್ನು ಕೆಲ ತಿಂಗಳ ಹಿಂದಷ್ಟೇ ನಿಲ್ಲಿಸಿದ್ದಾಗಿ ತಿಳಿದು ಬಂದಿದೆ.

ಕಳಪೆ ಕಾಮಗಾರಿ ಆರೋಪ: ಕೆರೆಯ ಬದಿ ಸರಿಯಾಗಿ ವಿದ್ಯುತ್ ಕಂಬಗಳನ್ನು ನಿಲ್ಲಿಸದಿರುವುದೇ ವಿದ್ಯುತ್ ಕಂಬಗಳು ಕೆಲವೇ ದಿನಗಳಲ್ಲಿ ನೆಲಕ್ಕುರುಳಲು ಕಾರಣವೆನ್ನಲಾಗುತ್ತಿದ್ದು, ಕಂಬಗಳನ್ನು ಅಳವಡಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಮನವಿ ಮಾಡಿದರೂ ಗುತ್ತಿಗೆದಾರ ಯಾರ ಮಾತನ್ನೂ ಕೇಳದೇ ಕಳಪೆ ಕಾಮಗಾರಿ ನಡೆಸಿದ್ದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.