12 ಜಿಲ್ಲೆಗಳಲ್ಲಿ ಮತ್ತೆ ಮಳೆ: ಮಹಿಳೆ ಬಲಿ

| Published : Apr 13 2024, 01:12 AM IST / Updated: Apr 13 2024, 06:48 AM IST

ಸಾರಾಂಶ

ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ಶುಕ್ರವಾರವೂ ಕೆಲಕಾಲ ಮಳೆಯಾಗಿದ್ದು, ವಿಜಯಪುರದಲ್ಲಿ ಸಿಡಿಲಿಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಈ ಮೂಲಕ ಬುಧವಾರ ರಾತ್ರಿಯಿಂದೀಚೆಗೆ ಜಿಲ್ಲೆಯಲ್ಲಿ ಸಿಡಿಲಬ್ಬರಕ್ಕೆ ಒಟ್ಟು ನಾಲ್ವರು ಬಲಿಯಾದಂತಾಗಿದೆ.

 ಬೆಂಗಳೂರು :  ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ಶುಕ್ರವಾರವೂ ಕೆಲಕಾಲ ಮಳೆಯಾಗಿದ್ದು, ವಿಜಯಪುರದಲ್ಲಿ ಸಿಡಿಲಿಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಈ ಮೂಲಕ ಬುಧವಾರ ರಾತ್ರಿಯಿಂದೀಚೆಗೆ ಜಿಲ್ಲೆಯಲ್ಲಿ ಸಿಡಿಲಬ್ಬರಕ್ಕೆ ಒಟ್ಟು ನಾಲ್ವರು ಬಲಿಯಾದಂತಾಗಿದೆ.

ಬೆಳಗಾವಿ, ವಿಜಯಪುರ, ಕೊಡಗು, ಚಿಕ್ಕಮಗಳೂರು, ಬಾಗಲಕೋಟೆ, ದಕ್ಷಿಣ ಕನ್ನಡ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಬಸವಳಿದಿದ್ದ ಜನ, ಜಾನುವಾರುಗಳಿಗೆ ಕೊಂಚ ನೆಮ್ಮದಿ ಮೂಡಿದಂತಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದರೂ ಸಿಡಿಲು, ಮಿಂಚಿನ ಅಬ್ಬರ ತುಸು ಜೋರಾಗಿಯೇ ಇತ್ತು. ಬುಧವಾರ ರಾತ್ರಿ ಮತ್ತು ಗುರುವಾರ ಜಿಲ್ಲೆಯಲ್ಲಿ ಬಾಲಕ ಸೇರಿ ಮೂವರು ಸಿಡಿಲಿಗೆ ಬಲಿಯಾಗಿದ್ದು, ಇದೀಗ ಶುಕ್ರವಾರ ಇಂಡಿ ತಾಲೂಕಿನ ತಾಂಬಾದಲ್ಲಿ ದೇವರಿಗೆ ನೈವೇದ್ಯ ತೆಗೆದುಕೊಂಡು ಹೋಗುವಾಗ ಸಿಡಿಲು ಬಡಿದು ಭಾರತಿ ಹನುಮಂತ ಕೆಂಗನಾಳ (42) ಎಂಬ ಮಹಿಳೆ ಅಸುನೀಗಿದ್ದಾಳೆ.

ಕೊಡಗು ಜಿಲ್ಲೆಯ ಹಲವೆಡೆ ಯುಗಾದಿ ಮರುದಿನದಿಂದಲೇ ಮೋಡ ಕವಿದ ವಾತಾವರಣವಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಮತ್ತೆ ಸಾಧಾರಣ ಮಳೆಯಾಗಿದೆ. ಇನ್ನು ಚಿಕ್ಕಮಗಳೂರಿನ ಶೃಂಗೇರಿ ಮತ್ತು ನರಸಿಂಹರಾಜಪುರದ ಕೆಲವೆಡೆಯೂ ಒಂದೆರಡು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಭಾಗದ ಶಿರಾಡಿಘಾಟ್‌ ಸುತ್ತಮುತ್ತ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಕೆಲಕಾಲ ಸಿಡಿಲು-ಗುಡುಗು ಸಹಿತ ಉತ್ತಮ ಮಳೆ ಬಿದ್ದ ವರದಿಯಾಗಿದೆ.