ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

| Published : Mar 23 2024, 01:01 AM IST

ಸಾರಾಂಶ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದ ಶೇಖಮಲೆ ಎಂಬಲ್ಲಿ ಮಧ್ಯಾಹ್ನ ಬೃಹತ್‌ ಮರವೊಂದು ರಸ್ತೆಗೆ ಬಿದ್ದು ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ.ಜಿಲ್ಲೆಯಾದ್ಯಂತ ಶುಕ್ರವಾರ ನಸುಕಿನ ಜಾವ ಬೇಸಗೆ ಮಳೆ ಸುರಿದಿದೆ. ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಪರಿಸರದಲ್ಲಿ ಭಾರಿ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಇಳೆಗೆ ತುಸು ತಂಪೆರೆದಿದೆ.

ಗುರುವಾರವೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ರಾತ್ರಿ ವೇಳೆ ಜಿಲ್ಲೆಯ ಗಡಿ ಭಾಗ ಪೈವಳಿಕೆ ಮತ್ತಿತರ ಕಡೆಗಳಲ್ಲಿ ಮಳೆ ಹನಿದಿತ್ತು. ಮೋಡದ ವಾತಾವರಣ ಇಡೀ ಜಿಲ್ಲೆಯಾದ್ಯಂತ ಶುಕ್ರವಾರ ಮಧ್ಯಾಹ್ನ ವರೆಗೂ ಮುಂದುವರಿದಿತ್ತು. ಉಳ್ಳಾಲದ ಕೋಟೆಕಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದಲ್ಲಿ 100.5 ಮಿಲಿ ಮೀಟರ್‌ ಮಳೆಯಾಗಿದೆ. ಬೆಳ್ಳಂಬೆಳಗ್ಗೆ ಕೋಟೆಕಾರು, ತಲಪಾಡಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಕಾಣಿಸಿದೆ. ತಲಪಾಡಿಯಲ್ಲಿ 58 ಮಿಲಿ ಮೀಟರ್‌, ಕಿನ್ಯಾದಲ್ಲಿ 46,5 ಮಿಲಿ ಮೀಟರ್‌ ಮಳೆಯಾಗಿತ್ತು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದ ಶೇಖಮಲೆ ಎಂಬಲ್ಲಿ ಮಧ್ಯಾಹ್ನ ಬೃಹತ್‌ ಮರವೊಂದು ರಸ್ತೆಗೆ ಬಿದ್ದು ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಾ.23ರಿಂದ ಮಳೆಯ ಮುನ್ಸೂಚನೆ ಕಡಿಮೆ ಇದ್ದರೂ ಕರಾವಳಿ ಜಿಲ್ಲೆಯ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಮಾ.28ರಿಂದ ದಕ್ಷಿಣ ಕರಾವಳಿಯಲ್ಲಿ ಮಳೆ ಪುನಾರಂಭಗೊಳ್ಳುವ ನಿರೀಕ್ಷೆ ಹೇಳಲಾಗಿದೆ.

ಸುರತ್ಕಲ್‌ನಲ್ಲಿ ಕೆಲಕಾಲ ಬಿರುಸಿನ ಮಳೆ

ಮೂಲ್ಕಿ: ಮೂಲ್ಕಿ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಸೇರಿದಂತೆ ಮೂಲ್ಕಿ ತಾಲೂಕಿನಲ್ಲಿ ಶುಕ್ರವಾರ ಮುಂಜಾನೆ 3 ಗಂಟೆಗೆ ಸುಮಾರು ಅರ್ಧ ಗಂಟೆ ಕಾಲ ಬಿರುಸಿನ ಮಳೆಯಾಗಿದೆ. ಮೋಡ ಕವಿದ ವಾತಾವರಣಾವಿತ್ತು. ಬೆಳಗ್ಗೆ 9.30ರಿಂದ 10 ಗಂಟೆವರೆಗೆ ಸುರತ್ಕಲ್‌, ಕುಳಾಯಿ ಪರಿಸರದಲ್ಲಿ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಮಳೆ ತಂಪು ನೀಡಿದೆ. ಸುರತ್ಕಲ್ ಕುಳಾಯಿವರೆಗೆ ಮಾತ್ರ ಮಳೆ ಬಂದಿದ್ದು ಬೇರೆ ಕಡೆ ಇರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗದೆ ಮೋಡ ಕವಿದ ವಾತಾವರಣದಿಂದ ಸೆಕೆ ಮತ್ತಷ್ಟು ಜೋರಾಗಿದೆ.