ಕೆಲವೆಡೆ ಧಾರಾಕಾರ ಮಳೆ: ಇಂದೂ ಕೂಡ ವರುಣಾರ್ಭಟ?

| Published : Nov 01 2024, 12:34 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಕೆಲವು ಭಾಗದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದ್ದು, ಶುಕ್ರವಾರವೂ ನಗರದ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಕೆಲವು ಭಾಗದಲ್ಲಿ ಗುರುವಾರ ಧಾರಾಕಾರ ಮಳೆಯಾಗಿದ್ದು, ಶುಕ್ರವಾರವೂ ನಗರದ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ.

ಕಳೆದ ಒಂದು ವಾರದ ಹಿಂದೆ ಬೆಂಗಳೂರು ನಗರದಲ್ಲಿ ಮಳೆಯಾಗಿ ಭಾರೀ ಆವಾಂತರ ಸೃಷ್ಟಿಯಾಗಿತ್ತು. ಇದರಿಂದ ಇದೀಗ ಬೆಂಗಳೂರಿನ ಜನರ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳಿದ್ದಾರೆ. ಗುರುವಾರ ಮತ್ತೆ ನಗರದ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆಆರ್ ಮಾರ್ಕೆಟ್, ಕಾರ್ಪೊರೇಷನ್, ಮೆಜೆಸ್ಟಿಕ್, ಮಲ್ಲೇಶ್ವರ, ಬಸವೇಶ್ವರ ನಗರ ಸೇರಿದಂತೆ ಹಲವಡೆ ಮಳೆಯಾಗಿದೆ.

ಮಹದೇವಪುರ, ಕೆ.ಆರ್. ಪುರ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು ಈ ಭಾಗದಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಹಬ್ಬದ ಖರೀದಿಗೆ ಬಂದ ಜನರು ಕೂಡಾ ಮಳೆಯಲ್ಲೇ ಹಬ್ಬದ ವಸ್ತುಗಳನ್ನು ಖರೀದಿ ಮಾಡಿದರು. ಇನ್ನು ಮಳೆಯಿಂದಾಗಿ ಪಟಾಕಿ ವ್ಯಾಪಾರಕ್ಕೆ ತೊಡಕಾಯಿತು.

ಕಾಡುಗೋಡಿಯಲ್ಲಿ 1.7 ಸೆಂ.ಮೀ. ಮಳೆ:

ಗುರುವಾರ ಕಾಡುಗೂಡಿಯಲ್ಲಿ ಅತೀತಿ ಹೆಚ್ಚು 1.7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ದೊಡ್ಡಾನೆಕುಂದಿ 1.6, ಹೂಡಿ 1.5, ನಂದಿಲೇಔಟ್‌, ಎಚ್‌ಎಎಲ್‌, ವಿದ್ಯಾರಣ್ಯಪುರದಲ್ಲಿ ತಲಾ 1.3, ಮಾರತ್‌ ಹಳ್ಳಿ, ಬಸವೇಶ್ವರ ನಗರ, ಶೆಟ್ಟಿಹಳ್ಳಿ, ನಾಗಪುರದಲ್ಲಿ ತಲಾ 1.2, ಗರುಡಾಚಾರ್ ಪಾಳ್ಯದಲ್ಲಿ 1.1 ಹಾಗೂ ಬಾಗಲಗುಂಡೆಯಲ್ಲಿ 1 ಸೆಂ.ಮೀ ಮಳೆಯಾಗಿದೆ.