ಕೆಲವೆಡೆ ಮಳೆ, ಹಲವೆಡೆ ಒಂಚೂರು ಇಲ್ಲ

| Published : May 13 2024, 12:01 AM IST

ಸಾರಾಂಶ

ಶಿರಸಿ, ಮುಂಡಗೋಡ, ಹಳಿಯಾಳ, ಜೋಯಿಡಾ, ಸಿದ್ದಾಪುರದ ಕೆಲವೆಡೆ, ಯಲ್ಲಾಪುರಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಭಾನುವಾರ ಶಿರಸಿ ಮತ್ತೆ ತೊಯ್ದು ತೊಪ್ಪೆಯಾಗಿದೆ. ಕರಾವಳಿಯಲ್ಲಿ ಮಾತ್ರ ಮಳೆಯಾಗಿಲ್ಲ.

ಕಾರವಾರ: ಬಿಸಿಲಿನಿಂದ ಕಂಗೆಟ್ಟಿದ್ದ ಉತ್ತರ ಕನ್ನಡದ ವಿವಿಧೆಡೆ ಮಳೆ ತಂಪೆರೆಯುತ್ತಿದೆ. ಶನಿವಾರ ಹಾಗೂ ಭಾನುವಾರ ಜಿಲ್ಲೆಯ ಕೆಲವೆಡೆ ಭಾರಿ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ. ಕರಾವಳಿ ಜನತೆ ಮಳೆಗಾಗಿ ಮುಗಿಲಿನತ್ತ ನೋಡುತ್ತಿದ್ದಾರೆ.ಶಿರಸಿ, ಮುಂಡಗೋಡ, ಹಳಿಯಾಳ, ಜೋಯಿಡಾ, ಸಿದ್ದಾಪುರದ ಕೆಲವೆಡೆ, ಯಲ್ಲಾಪುರಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಭಾನುವಾರ ಶಿರಸಿ ಮತ್ತೆ ತೊಯ್ದು ತೊಪ್ಪೆಯಾಗಿದೆ. ಕರಾವಳಿಯಲ್ಲಿ ಮಾತ್ರ ಮಳೆಯಾಗಿಲ್ಲ.

ಹವಾಮಾನ ಇಲಾಖೆ ಮೇ 12ರಿಂದ 16ರ ತನಕ ಉತ್ತರ ಕನ್ನಡ ಜಿಲ್ಲಾದ್ಯಂತ ಮುಂಗಾರುಪೂರ್ವ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅದರಲ್ಲೂ 14ರಿಂದ 16ರ ತನಕ ಭಾರಿ ಮಳೆಯಾಗಲಿದೆ ಎಂದೂ ತಿಳಿಸಿದೆ. ಆದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆಯಾಗಿದ್ದರೆ, ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳಗಳಲ್ಲಿ ಭಾನುವಾರ ಸಂಜೆ ತನಕ ಮಳೆಯಾಗಿಲ್ಲ.

ಕರಾವಳಿ ಅಕ್ಷರಶಃ ಕಾಯುತ್ತಿದೆ. ಆರ್ದ್ರತೆಯ ಪ್ರಮಾಣ ಹೆಚ್ಚಿರುವುದರಿಂದ ಸೆಕೆ, ಜೊತೆಯಲ್ಲಿ ಬೆವರೂ ಹರಿಯುತ್ತಿದೆ. ಮಳೆ ಬಂದರೆ ಸಾಕು ಎಂದು ಜನತೆ ಪ್ರಾರ್ಥಿಸುತ್ತಿದ್ದಾರೆ.

ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ನೀರಿನ ಬರ ತೀವ್ರವಾಗಿದೆ. ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದಾರೆ. ಇನ್ನು ಜಾನುವಾರುಗಳಿಗೆ ನೀರುಣಿಸುವುದು ಒಂದು ಸವಾಲಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಕೆ. ಹಲವೆಡೆ ಅಡಕೆ ತೋಟಗಳಿಗೆ ನೀರುಣಿಸಲಾರದೆ ಕೃಷಿಕರು ಕಂಗೆಟ್ಟಿದ್ದಾರೆ. ಅಡಕೆ ಮರಗಳು ಒಣಗಿದರೆ ಮತ್ತೆ ಹೊಸದಾಗಿ ಅಡಕೆ ಮರಗಳನ್ನು ನೆಟ್ಟು ಫಸಲು ಬಿಡಲು 6- 7 ವರ್ಷಗಳ ತನಕ ಕಾಯಬೇಕು. ಇದರ ಜತೆ ತೆಂಗು, ಬಾಳೆ ಮತ್ತಿತರ ಬೆಳೆಗಳನ್ನೂ ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ರೈತರನ್ನು ಕಾಡುತ್ತಿದೆ. ಸದ್ಯ ಮಳೆ ಬಂದಲ್ಲಿ ಅಡಕೆ ತೋಟಗಳಿಗೆ ಸಮಸ್ಯೆಯಾಗದು. ಆದರೆ ಮಳೆಯಾಗದ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಮೋಡ ಕವಿದ ವಾತಾವರಣ, ಆಗಾಗ ಗುಡುಗು, ಮಿಂಚುಗಳ ಅಬ್ಬರದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿಕರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಎಲ್ಲೆಡೆ ಮುಂಗಾರು ಪೂರ್ವ ಮಳೆಯಾದರೆ ಮಾತ್ರ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಅಡಕೆ, ತೆಂಗಿನ ತೋಟಗಳಿಗೆ ನೀರುಣಿಸುವ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದಲ್ಲಿ ಕೃಷಿಕರ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ.

ಶಿರಸಿಯಲ್ಲಿ ತಂಪೆರೆದ ಮಳೆ

ಶಿರಸಿ: ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನತೆಗೆ ಭಾನುವಾರ ಸುರಿದ ಮಳೆ ತಂಪೆರೆದಿದೆ.

ಬೆಳಗ್ಗೆಯಿಂದ ಮೋಡ ಕವಿದ ಸ್ಥಿತಿಯಿದ್ದರೂ ಮಧ್ಯಾಹ್ನದ ಸಮಯ ವಾತಾವರಣದಲ್ಲಿ ಉಷ್ಣಾಂಶ ೩೫ ಡಿಗ್ರಿ ಇತ್ತು. ಇದರಿಂದ ಜನರು ಸೆಖೆ ತಾಳಲಾರದೆ ನೆರಳನ್ನು ಆಶ್ರಯಿಸುತ್ತಿದ್ದರು. ಆದರೆ ಸಂಜೆ ೫ ಗಂಟೆ ಸುಮಾರಿನಿಂದ ಮುಕ್ಕಾಲು ಗಂಟೆ ನಗರದ ಕೆಲ ಭಾಗದಲ್ಲಿ ಸುರಿದ ಮಳೆ ಭೂಮಿಯನ್ನು ತಂಪೆರೆಯಿತು.

ಮೋಡ ಕವಿದ ವಾತಾವರಣ:

ಭಾನುವಾರ ಮಧ್ಯಾಹ್ನ ನಗರದ ಕೆಲವೆಡೆ ಹಾಗೂ ತಾಲೂಕಿನ ಪೂರ್ವ ಭಾಗದ ಕೆಲ ಪ್ರದೇಶದಲ್ಲಿ ಮಾತ್ರ ಮಳೆ ಸುರಿದಿದ್ದು, ತಾಲೂಕಿನ ಗ್ರಾಮೀಣ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಳೆ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಭಾಗದ ಜನರಿಗೆ ಮಳೆ ಮೋಸ ಮಾಡಿದೆ. ಅದೇ ರೀತಿ ಸಿದ್ದಾಪುರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಸಾಧಾರಣ ಮಳೆ ಬಿದ್ದಿದೆ.