ಸಾರಾಂಶ
ಹುಬ್ಬಳ್ಳಿ: ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದ ವಾಣಿಜ್ಯ ನಗರದ ಜನತೆಗೆ ಶುಕ್ರವಾರ ಮಧ್ಯಾಹ್ನ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ತಂಪೆರೆಯಿತು. ದಿಢೀರ್ ಸುರಿದ ಮಳೆಯಿಂದಾಗಿ ಹಲವೆಡೆ ವ್ಯಾಪಾರಸ್ಥರು, ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಯಿತು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಬಿಸಿಲಿನಾರ್ಭಟ ಇತ್ತು. ಮಳೆ ಬರುವ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ, ಮಧ್ಯಾಹ್ನ ಏಕಾಏಕಿ ಆಕಾಶ ಕಪ್ಪು ಮೋಡಗಳಿಂದ ಆವೃತವಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಈ ವೇಳೆ ಗುಡುಗು-ಸಿಡಿಲು ರಭಸದ ಗಾಳಿ ಮಳೆಯೊಂದಿಗೆ ಜತೆಗೂಡಿದವು.ನಗರದ ಪ್ರಮುಖ ಹಾಗೂ ಒಳ ರಸ್ತೆಯ ತಗ್ಗು ಪ್ರದೇಶದಲ್ಲಿ ಹಾಗೂ ಚರಂಡಿಯಲ್ಲಿ ಹರಿದ ನೀರು ಕೆಲಕಾಲ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡಿತು. ನಗರದ ಚೆನ್ನಮ್ಮ ವೃತ್ತ, ಕೋರ್ಟ್ ವೃತ್ತ, ಸ್ಟೇಶನ್ ರಸ್ತೆ, ಜೆ.ಸಿ. ನಗರದ ರಸ್ತೆ, ದಾಜಿಬಾನ್ ಪೇಟೆ, ದುರ್ಗದಬೈಲ್ ಹಾಗೂ ಕೊಪ್ಪಿಕರ್ ರಸ್ತೆ ಸೇರಿದಂತೆ ಹಲವೆಡೆ ಮಳೆನೀರು ನಿಂತ ಕಾರಣಕ್ಕೆ ಪಾದಚಾರಿಗಳು ಹಾಗೂ ವಾಹನ ಸವಾರರು ಹರಸಾಹಸ ಪಡುವಂತಾಯಿತು.
ಜನತಾ ಬಜಾರ್ ಹಾಗೂ ದಾಬಿಬಾನ್ ಪೇಟೆ, ಕೇಶ್ವಾಪುರದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಏಕಾಏಕಿ ಸುರಿದ ಮಳೆಗೆ ತಮ್ಮ ವಸ್ತುಗಳನ್ನು ರಕ್ಷಿಸಲು ಪರದಾಡುವಂತಾಯಿತು. ತರಕಾರಿ, ಹೂವು, ಹಣ್ಣು ಹಾಗೂ ವಿವಿಧ ವಸ್ತುಗಳು ಮಳೆಯಲ್ಲಿಯೇ ನೆನೆಯುತ್ತಿದ್ದ ದೃಶ್ಯಗಳು ಕಂಡು ಬಂದವು. ಅಲ್ಲಿನ ವ್ಯಾಪಾರಸ್ಥರು ಅಕ್ಕ-ಪಕ್ಕದ ಮಳಿಗೆ ಹಾಗೂ ಮನೆಯಲ್ಲಿ ಆಶ್ರಯ ಪಡೆದರು.ಮಳೆಯ ಪೂರ್ವದಲ್ಲಿ ರಭಸದ ಗಾಳಿ ಸುರಿದ ಹಿನ್ನೆಲೆಯಲ್ಲಿ ನಗರದ ಹಲವೆಡೆ 2 ಗಂಟೆಗೂ ಹೆಚ್ಚುಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿತು. ಸಂಜೆ ವರೆಗೂ ಚಿಕ್ಕ-ಚಿಕ್ಕ ಹನಿಗಳಿಂದ ಕೂಡಿದ್ದ ತುಂತುರು ಮಳೆ ಮುಂದುವರಿಯಿತು. ಸಂಜೆ ತಮ್ಮ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ಸಿಬ್ಬಂದಿ ಹಾಗೂ ನೌಕರರು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದದ್ದು ಕಂಡು ಬಂದಿತು.ಧಾರವಾಡದಲ್ಲಿ ಆಲಿಕಲ್ಲು ಮಳೆ
ಧಾರವಾಡ: ಸಿಡಿಲು-ಗುಡುಗು, ಮಿಂಚು-ಜೋರಾದ ಗಾಳಿಯೊಂದಿಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಮಳೆಯಾಗಿದ್ದು, ಈ ಪೈಕಿ ಕೆಲ ಭಾಗದಲ್ಲಿ ಆಲಿಕಲ್ಲು ಮಳೆ ಕೂಡ ಸುರಿದಿದೆ.ಕೆಲ ದಿನಗಳಿಂದ ಬೆಳಗ್ಗೆಯಿಂದ ಸಂಜೆ ವರೆಗೂ ಉರಿ ಬಿಸಿಲು, ಸಂಜೆ ಹೊತ್ತಿಗೆ ಮಳೆಯಾಗುತ್ತಿದೆ. ಅದೇ ರೀತಿ ಶುಕ್ರವಾರ ಕೂಡ ಮಧ್ಯಾಹ್ನದ ವರೆಗೂ ಬಿಸಿಲಿನ ಹೊಡೆತ ಮುಂದುವರೆದರೆ, ಆ ಬಳಿಕ ಮಳೆ ಸುರಿದಿದೆ. ಧಾರವಾಡ ಶಹರ ವ್ಯಾಪ್ತಿಯ ಬಹುತೇಕ ಕಡೆ ಸುರಿದ ಮಳೆಯಲ್ಲಿ ಆಲಿಕಲ್ಲು ಬಿದ್ದಿವೆ. ಇದರೊಂದಿಗೆ ಜೋರಾಗಿ ಬೀಸಿದ ಗಾಳಿಗೆ ಕೆಲ ಕಡೆ ಮರಗಳು ಧರೆಗೆ ಉರುಳಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಬಿರುಸಾಗಿಯೇ ಸುರಿದ ಮಳೆಯ ಹೊಡೆತಕ್ಕೆ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡರೆ ಕೋರ್ಟ್ ವೃತ್ತದಲ್ಲಿ ಒಳಚರಂಡಿ ಒಡೆದು ತೀವ್ರ ತೊಂದರೆ ಉಂಟು ಮಾಡಿತು. ಕೆಲ ಕಡೆ ರಸ್ತೆ ಬದಿಯಹಣ್ಣಿನ ಅಂಗಡಿಗಳಿಂದ ಹಣ್ಣುಗಳು ಮಳೆ ನೀರಿನಲ್ಲಿ ತೇಲಿ ಹೋಗಿದ್ದು ಕಂಡು ಬಂತು. ಶಹರ ಪೊಲೀಸ್ ಠಾಣೆಯ ಕ್ವಾಟರ್ಸ್ ಬಳಿ ಬೃಹತ್ ಆಕಾರದ ಮರ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಯ್ಸಳ ನಗರದ ಹನುಮಾನ ದೇವಸ್ಥಾನದ ಮೇಲೆಯೇ ಮರವು ಬಿದ್ದಿದ್ದು, ದೇವಸ್ಥಾನದ ಪಕ್ಕದಲ್ಲಿದ್ದ ಆಟೋ ಜಖಂಗೊಂಡಿದೆ. ದೇವಸ್ಥಾನ ಆವರಣದಲ್ಲಿ ಹನುಮ ಜಯಂತಿ ಆಚರಣೆಗೆ ಮಾಡಿಕೊಂಡಿದ್ದ ಸಿದ್ಧತೆ ಹಾಳಾಗಿದ್ದಲ್ಲದೇ ದೇವಸ್ಥಾನಕ್ಕೆ ಕೂಡ ಧಕ್ಕೆ ಉಂಟಾಗಿದೆ. ಈ ವೇಳೆ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಜಿಲ್ಲಾಸ್ಪತ್ರೆಗೆ ಹೋಗುವ ರಸ್ತೆ ಸೇರಿದಂತೆ ವಿವಿಧ ಕಡೆ ಮರಗಳು ಧರೆಗೆ ಉರುಳಿರುವ ಬಗ್ಗೆ ವರದಿಗಳಾಗಿವೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ, ಯಾದವಾಡ ಸೇರಿದಂತೆ ವಿವಿಧ ಗ್ರಾಮೀಣ ಭಾಗದಲ್ಲಿ ಜೋರಾದ ಗಾಳಿಯೊಂದಿಗೆ ಮಳೆ ಸುರಿದಿದ್ದು, ಕೆಲ ಭಾಗದಲ್ಲಿ ಮರಗಳು ಧರೆಗೆ ಉರುಳಿರುವ ಬಗ್ಗೆ ವರದಿಯಾಗಿದೆ.
ಇದಲ್ಲದೇ ಕೆಲ ಕಡೆ ವಿದ್ಯುತ್ ಕಂಬಗಳು ಉರುಳಿದ ಪರಿಣಾಮ ತಡರಾತ್ರಿವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.